ಸರಿತಾ ದೇವಿ ಪ್ರಕರಣದಲ್ಲಿ ದಯೆ ತೋರಿ: ಬಾಕ್ಸಿಂಗ್ ಇಂಡಿಯಾ ಮನವಿ
ಏಷ್ಯನ್ ಕ್ರೀಡಾಕೂಟದಲ್ಲಿ ಪದಕ...
ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ ಪದಕವನ್ನು ನಿರಾಕರಿಸುವ ಮೂಲಕ ಅಸಮಾಧಾನ ವರ್ತನೆ ತೋರಿದ ಭಾರತೀಯ ಬಾಕ್ಸರ್ ಸರಿತಾ ದೇವಿ ಅವರನ್ನು ವಜಾಗೊಳಿಸಿರುವ ಪ್ರಕರದಲ್ಲಿ, ಮೃದುಸ್ವಭಾವ ತೋರುವಂತೆ ಬಾಕ್ಸಿಂಗ್ ಇಂಡಿಯಾದ ಅಧ್ಯಕ್ಷ ಸಂದೀಪ್ ಜಾಜೊಡಿಯಾ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಗೆ ಮನವಿ ಮಾಡಿದ್ದಾರೆ.
ಭವಿಷ್ಯದ ಪಂದ್ಯಾವಳಿಗಳನ್ನು ಗಮನದಲ್ಲಿಟ್ಟುಕೊಂಡು, ಸೋಮವಾರ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಹಾಗೂ ಕ್ರೀಡಾ ಸಚಿವಾಲಯ ಸಭೆ ನಡೆಸಿತ್ತು. ಈ ವೇಳೆ ಮಾತನಾಡಿದ ಸಂದೀಪ್ ಜಾಜೊಡಿಯಾ, ಸರಿತಾ ದೇವಿ ಭಾವುಕರಾಗಿ ಆ ರೀತಿಯಲ್ಲಿ ವರ್ತಿಸಿದ್ದರು. ಯಾವುದೇ ವ್ಯಕ್ತಿ ಸೋಲನುಭವಿಸಿದ ನಂತರ ವ್ಯಕ್ತಪಡಿಸುವ ನಿರಾಸೆಯಾಗಿದ್ದು, ಅದು ಯೋಜಿತ ನಿರ್ಧಾರವಲ್ಲ. ಸಹಜವಾಗಿ ಬಂದ ಕ್ಷಣ ಎಂದು ತಿಳಿಸಿದ್ದಾರೆ.
ಸರಿತಾ ದೇವಿ ವರ್ತನೆ, ಕ್ರೀಡಾಪಟು ನಿಯಮಾವಳಿಗೆ ತೋರಿದ ಅಗೌರವ ಎಂಬುದನ್ನು ನಿರಾಕರಿಸುವುದಿಲ್ಲ. ಆದರೆ ಸರಿತಾ ಈ ಘಟನೆ ನಂತರ ಕ್ಷಮೆ ಕೋರಿದ್ದಾರೆ. ಈ ಪ್ರಕರಣವನ್ನು ಮಾನವೀಯ ದೃಷ್ಠಿಕೋನದಲ್ಲಿ ನೋಡಬೇಕಾದ ಅಗತ್ಯವಿದೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಈ ಕುರಿತು ಸ್ಪಷ್ಟನೆಯನ್ನು ಕೋರಿದ್ದು, ಇಂದು ಎಐಬಿಎಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
ಸರಿತಾ ಜತೆಗೆ ರಾಷ್ಟ್ರೀಯ ಕೋಚ್ ಗುರುಬಕ್ಷ್ ಸಿಂಗ್ ಸಂಧು ಸೇರಿದಂತೆ ಮೂವರು ರಿಂಗ್ ಕೋಚ್‌ಗಳನ್ನು ವಜಾಗೊಳಿಸಲಾಗಿದ್ದು, ಇವರು ಸಹ ಎಐಬಿಎಗೆ ಸ್ಪಷ್ಟನೆಯನ್ನು ಕಳುಹಿಸಿದ್ದಾರೆ.