ಬಿಲಿಯರ್ಡ್ಸ್ನಲ್ಲಿ ಪಂಕಜ್ ಅಡ್ವಾಣಿ ಐತಿಹಾಸಿಕ ಸಾಧನೆ
ಭಾರತದ ಅಗ್ರ ಬಿಲಿಯರ್ಡ್ಸ್ ತಾರೆ ಬೆಂಗಳೂರಿನ ಪಂಕಜ್ ಅಡ್ವಾಣಿ ಇಂಗ್ಲೆಂಡ್ನ ಲೀಡ್ಸ್ನಲ್ಲಿ ನಡೆದ ಸಮಯ ಮಾದರಿಯ ...
ಲೀಡ್ಸ್: ಭಾರತದ ಅಗ್ರ ಬಿಲಿಯರ್ಡ್ಸ್ ತಾರೆ ಬೆಂಗಳೂರಿನ ಪಂಕಜ್ ಅಡ್ವಾಣಿ ಇಂಗ್ಲೆಂಡ್ನ ಲೀಡ್ಸ್ನಲ್ಲಿ ನಡೆದ ಸಮಯ ಮಾದರಿಯ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಪಂಕಜ್ ತಮ್ಮ ವೃತ್ತಿ ಜೀವನದಲ್ಲಿ ಮೂರನೇ ಬಾರಿಗೆ ಸಮಯ ಮತ್ತು ಅಂಕ ಮಾದರಿಯ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬಿಲಿಯರ್ಡ್ಸ್ ತಾರೆ ಎಂಬ ಕೀರ್ತಿಗೂ ಪಂಕಜ್ ಪಾತ್ರರಾಗಿದ್ದಾರೆ. ಅಲ್ಲದೆ, ಅಡ್ವಾಣಿಗೆ ಇದು 12ನೇ ವಿಶ್ವ ಬಿಲಿಯರ್ಡ್ಸ್ ಪಟ್ಟವಾಗಿದೆ.
ಸಾಧನೆಯೊಂದಿಗೆ ವಿಶ್ವ ಬಿಲಿಯರ್ಡ್ಸ್ನಲ್ಲಿ ಮತ್ತೆ ಫಾರ್ಮ್ಗೆ ಮರಳಿರುವುದನ್ನು ಸಾಬೀತು ಪಡಿಸಿರುವ ಬೆಂಗಳೂರಿನ ಗೋಲ್ಡನ್ ಬಾಯ್ ಅಡ್ವಾಣಿ, ಬುಧವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ನ ಉದಯೋನ್ಮುಖ ಆಟಗಾರ ರಾಬರ್ಟ್ ಹಾಲ್ ವಿರುದ್ಧ 1928-893 ಅಂಕಗಳ ಭಾರೀ ಅಂತರದಿಂದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಪಂದ್ಯದ ಆರಂಭದಿಂದ ಅಂತ್ಯದವರೆಗೂ ಎದುರಾಳಿ ಮೇಲೆ ಪಾರಮ್ಯ ಮೆರೆದ ಪಂಕಜ್ ಸುಲಭವಾಗಿ ಜಯ ಕಂಡುಕೊಂಡರು.
ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಇನ್ನೊಬ್ಬ ಆಟಗಾರ ಬೆಂಗಳೂರಿನವರೇ ಆದ ಬಾಲಚಂದ್ರ ಭಾಸ್ಕರ್ ಅವರನ್ನು ಸೋಲಿಸಿದ್ದ ಇಂಗ್ಲೆಂಡ್ನ ಹಾಲ್ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದರು. ಆದರೆ ಪಂಕಜ್ ಅನುಭವಿ ಆಟದ ಎದುರು ಎದುರಾಳಿ ಮಂಕಾದವರಂತೆ ಕಂಡುಬಂದರು. ಹೀಗಾಗಿ ಮೊದಲ ವಿಶ್ವ ಚಾಂಪಿಯನ್ ಶಿಪ್ನ ಫೈನಲ್ನಲ್ಲಿ ತವರಿವ ಆಟಗಾರ ಕಹಿ ಅನುಭವಿಸಬೇಕಾಯಿತು.
ಕಳೆದ ವಾರವಷ್ಟೇ 150 ಅಪ್ ಅಂಕ ಮಾದರಿಯ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಪಂಕಜ್ ಅಡ್ವಾಣಿ, ಈಗ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಮಿಂಚಿದರು. ಈ ಹಿಂದೆ, 2005 ಮತ್ತು 2008ರಲ್ಲಿ ಪಂಕಜ್ ಅಡ್ವಾಣಇ ಅವರು ಈ ಎರಡೂ ಮಾದರಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಹೀಗಾಗಿ ಈಗ ಮೂರನೇ ಬಾರಿಗೆ ಈ ಸಾಧನೆ ಮಾಡಿದ ಮೊದಲಿಗ ಎನಿಸಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ನ ಮೈಕ್ ರಸೆಲ್ 2010 ಮತ್ತು 2011ರಲ್ಲಿ ಈ ಎರಡೂ ಮಾದರಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು,
ಐದು ಗಂಟೆಗಳ ಕಾಲ ನಡೆದ ಫೈನಲ್ ಪಂದ್ಯದ ಮೊದಲಾರ್ಧದಲ್ಲಿ ಅಡ್ವಾಣಿ ಅವರು 746-485 ಅಂಕಗಳಿಂದ ಮುನ್ನಡೆ ಕಂಡುಕೊಂಡಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಅಡ್ವಾಣಿ ಸಂಪೂರ್ಣ ಮೇಲುಗೈ ಸಾಧಿಸಿದರು. ದ್ವಿತೀಯಾರ್ಧ ಪಂದ್ಯ ಆರಂಭವಾದ ನಂತರ 94,182, 289 ಹಾಗೂ 145 ಅಂಕಗಳಿಸುವ ಮೂಲಕ 1000 ಅಂಕ ಗಳಿಸಿದ ಅಡ್ವಾಣಿ , ಪಂದ್ಯ ಮುಕ್ತಾಯಕ್ಕೆ ಇನ್ನೂ ಒಂದು ಗಂಟೆ ಬಾಕಿ ಇರುವಂತೆಯೇ ಪಂದ್ಯವನ್ನು ಬುಟ್ಟಿಗೆ ಹಾಕಿಕೊಂಡಿದ್ದರು.