ರ್ಯಾಂಕಿಂಗ್: ನಂ.1ಗೆ ಭಾರತ ಮತ್ತೆ ಲಗ್ಗೆ
ಒಂದೆಡೆ ಇಂಗ್ಲೆಂಡ್ ವಿರುದ್ಧದ ಸತತ ಎರಡು ಗೆಲುವುಗಳು ಹಾಗೂ ಮತ್ತೊಂದೆಡೆ...
ದುಬೈ: ಒಂದೆಡೆ ಇಂಗ್ಲೆಂಡ್ ವಿರುದ್ಧದ ಸತತ ಎರಡು ಗೆಲುವುಗಳು ಹಾಗೂ ಮತ್ತೊಂದೆಡೆ ಪ್ರಬಲ ಆಸ್ಟ್ರೇಲಿಯಾವನ್ನು ಜಿಂಬಾಬ್ವೆ ಪಡೆ ಬಗ್ಗುಬಡಿದ ಪರಿಣಾಮ ಭಾರತ ತಂಡ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಎಲ್ಟನ್ ಚಿಗುಂಬುರಾ ನಾಯಕತ್ವದ ಜಿಂಬಾಬ್ವೆ ತಂಡ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಭಾನುವಾರ ನಡೆದ ಏಕದಿನ ತ್ರಿಕೋನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್‌ಗಳಿಂದ ಸದೆಬಡಿದಿತ್ತು. ಇದರೊಂದಿಗೆ 31 ವರ್ಷಗಳಲ್ಲಿ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ವಿಜಯೋತ್ಸವ ಆಚರಿಸಿದ ಸಾಧನೆ ಮಾಡಿತ್ತು.
ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ 10ನೇ ಕ್ರಮಾಂಕದಲ್ಲಿರುವ ಜಿಂಬಾಬ್ವೆ ವಿರುದ್ಧ ಅನುಭವಿಸಿದ ಸೋಲು ಆಸ್ಟ್ರೇಲಿಯಾಕ್ಕೆ ದೊಡ್ಡ ಆಘಾತ ಉಂಟು ಮಾಡಿದ್ದು, ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ. ಭಾರತ ಇಂಗ್ಲೆಂಡ್ ವಿರುದ್ಧ ಎರಡು ಮತ್ತು ಮೂರನೇ ಪಂದ್ಯಗಳನ್ನು ಗೆದ್ದುಕೊಂಡು 2-0 ಮುನ್ನಡೆಯೊಂದಿಗೆ ತನ್ನ ಪ್ರಭುತ್ವ ಸ್ಥಾಪಿಸಿದೆ. ಕೊನೆಯ ಎರಡೂ ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರೆ, ಭಾರತ ಅಗ್ರ ಕ್ರಮಾಂಕದಲ್ಲಿ ಮುದುವರಿಯಲಿದೆ.
ರ್ಯಾಂಕಿಂಗ್ ಪಟ್ಟಿಯ ಪ್ರಕಾರ ಸದ್ಯ ಭಾರತ 57 ಪಂದ್ಯಗಳಿಂದ 114 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 40 ಪಂದ್ಯಗಳಿಂದ 113 ಅಂಕ ಕಲೆಹಾಕಿದೆ. ಶ್ರೀಲಂಕಾ 65 ಪಂದ್ಯಗಳಿಂದ 11 ರೇಟಿಂಗ್ ಹಾಗೂ ಆಸ್ಟ್ರೇಲಿಯಾ 38 ಪಂದ್ಯಗಳಿಂದ 11 ರೇಟಿಂಗ್‌ನೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದ ಗೌರವ ಪಡೆದಿವೆ.