ಸರಣಿ ಜಯಕ್ಕೆ ಭಾರತ ಕಾತರ
ಬರ್ಮಿಂಗ್ ಹ್ಯಾಮ್: ಆಂಗ್ಲರ ವಿರುದ್ಧದ ಎರಡು ಮತ್ತು ಮೂರನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಮುನ್ನಡೆ ಕಂಡು ಕೊಂಡಿರುವ ಟೀಂ ಇಂಡಿಯಾ, ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ 4ನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ 5 ಪಂದ್ಯಗಳ ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಬ್ರಿಸ್ಟಲ್ನಲ್ಲಿ ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯ ಮಳೆಗೆ ಆಹುತಿಯಾದ ನಂತರ, ಕಾರ್ಡಿಫ್ನಲ್ಲಿ 2ನೇ ಪಂದ್ಯ ಹಾಗೂ ನಾಟಿಂಗ್ಹ್ಯಾಮ್ನಲ್ಲಿ ನಡೆದ 3ನೇ ಪಂದ್ಯದಲ್ಲಿ ಜಯ ಸಾಧಿಸಿದ ಭಾರತ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಂಡುಕೊಂಡಿದೆ. ಹೀಗಾಗಿ ವಿಶ್ವಾಸದಲ್ಲಿರುವ ಮಹೇಂದ್ರ ಸಿಂಗ್ ನಾಯಕತ್ವದ ತಂಡ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಮುಡಿಗೇರಿಸಿಕೊಳ್ಳುವ ಕಾತರದಲ್ಲಿದೆ.
ಇನ್ನೊಂದೆಡೆ ಟೆಸ್ಟ್ ಸರಣಿ ಗೆದ್ದ ನಂತರ ಅದೇ ರೀತಿಯ ಪ್ರದರ್ಶನ ಮುಂದುವರಿಸುವಲ್ಲಿ ವೈಫಲ್ಯ ಕಂಡಿರುವ ಇಂಗ್ಲೆಂಡ್ ತಂಡ, ಏಕದಿನ ಕ್ರಿಕೆಕ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಒದ್ದಾಡುತ್ತಿದ್ದು, ಸರಣಿಯಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದೆ. ನಾಯಕ ಅಲಸ್ಟೇರ್ ಕುಕ್ ಸೇರಿದಂತೆ ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿವೆ. ಕುಕ್ ಇದುವರೆಗೆ ಎರಡು ಪಂದ್ಯಗಳಲ್ಲಿ ಅಲೆಕ್ಸ್ ಹಾಲ್ಸ್ ಅವರೊಂದಿಗೆ ಎರಡು ಅರ್ಧ ಶತಕದ ಜತೆಯಾಟವಾಡಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಸತತವಾಗಿ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದೆ. ಹೀಗಾಗಿಯೇ ಅದಕ್ಕೆ ಇದುವರೆಗೂ ಏಕದಿನ ಕ್ರಿಕೆಟ್ನಲ್ಲಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ವಿಶ್ವಕಪ್ಗೂ ಮೊದಲು ಭಾರತಕ್ಕೆ ಇದು ಕೊನೆಯ ವಿದೇಶಿ ಪ್ರವಾಸವಾಗಿದೆ. ಆದರೆ ರೋಹಿತ್ ಶರ್ಮಾ ಅವರು ಬೆರಳಿಗೆ ಗಾಯ ಮಾಡಿಕೊಂಡಿರುವುದು, ವಿಶ್ವಕಪ್ಗೆ ತಂಡದ ಕಾರ್ಯತಂತ್ರ ಹೆಣೆಯಲು ತಂಡಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.
ಸರಣಿಯ ಐದೂ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರು ಆರಂಭಿಕವಾಗಿ ಪ್ರದರ್ಶನ ನೀಡಬೇಕು ಎಂಬುದು ತಂಡದ ಕಾರ್ಯತಂತ್ರವಾಗಿತ್ತು. ಆದರೆ, ರೋಹಿತ್ ಗಾಯಗೊಂಡಿರುವುದು ತಂಡ ಅಣಿಗೊಳಿಸಲು ಕಾರ್ಯತಂತ್ರ ರೂಪಿಸಲು ಮುಂದಾಗಿದ್ದ ಆಡಳಿತ ಮಂಡಳಿಗೆ ತೊಂದರೆಯಾಗಿ ಪರಿಣಿಸಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಅವಕಾಶ ಪಡೆದುಕೊಂಡ ಅಂಬಟಿ ರಾಯುಡು ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ.
ಏತನ್ಮಧ್ಯೆ, ಮುರಳಿ ವಿಜಯ್ ಗಾಯಾಳು ರೋಹಿತ್ ಶರ್ಮಾ ಸ್ಥಾನದಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮುರಳಿ ಲಭ್ಯತೆಯೊಂದಿಗೆ ರಹಾನೆ ಮತ್ತೆ ನಾಲ್ಕನೇ ಕ್ರಮಾಂಕದಲ್ಲೇ ಅಂಗಣಕ್ಕಿಳಿಯಬೇಕಾಗಿದೆ. ಒಂದು ವೇಳೆ ವಿಜಯ್ ಅಡದಿದ್ದರೆ, ರಹಾನೆ ಅವರು ವಿಶ್ವಕಪ್ನಲ್ಲಿ ಆರಂಭಿಕರಾಗಿ ಅಂಗಣಕ್ಕಿಳಿಯಲು 3ನೇ ಆಟಗಾರ ಎನಿಸಿದ್ದಾರೆ. ಆದರೆ, ವಿಶ್ವಕಪ್ಗೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಈ ಸರಣಿಯ ಫಲಿತಾಂಶದ ಮೇಲೂ ಅವಲಂಬಿತವಾಗಿದೆ.