ನನ್ನ ದಾಖಲೆ ಹಿಂದಿಕ್ಕಲು ಕಷ್ಟ: ಬೋಲ್ಟ್
ಬೆಂಗಳೂರು: ವಿಶ್ವದ ವೇಗದ ಓಟಗಾರ ಎಂಬ ಖ್ಯಾತಿ ಪಡೆದಿರುವ ಜಮೈಕಾದ ಸ್ಟ್ರಿಂಟರ್ ಉಸೇನ್ ಬೋಲ್ಟ್, 100 ಮೀಟರ್ ಓಟದಲ್ಲಿ ನಾನು ನಿರ್ಮಿಸಿರುವ ವಿಶ್ವ ದಾಖಲೆಯನ್ನು ಹಿಂದಿಕ್ಕುವುದು ಕಷ್ಟಕರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪುಮಾ ಪ್ರಾಯೋಕತ್ವದಲ್ಲಿ ಒಂದು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ ಉಸೇನ್ ಬೋಲ್ಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನನ್ನ ಪ್ರಕಾರ 200 ಮೀ.ಓಟದಲ್ಲಿ ಮತ್ತಷ್ಟು ವೇಗ ಕಂಡುಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ತಾಂತ್ರಿಕವಾಗಿ ಹೆಚ್ಚು ಅಭ್ಯಾಸ ನಡೆಸಬೇಕಾಗಿದೆ. 200 ಮೀ. ಓಟವನ್ನು 19 ಸೆ. ಒಳಗಾಗಿ ಓಡಲು ಪ್ರಯತ್ನಿಸುತ್ತಿದ್ದೇನೆ. ಇದರಲ್ಲಿ ಯಶಸ್ವಿಯಾದರೆ, 100 ಮೀಟರ್ ಓಟದಲ್ಲಿ ನನಗೆ ನೆರವಾಗಲಿದೆ. ಆದರೆ ಸದ್ಯ ನಿರ್ಮಿಸಲಾಗಿರುವ 100 ಮೀ. ಓಟದ ದಾಖಲೆಯನ್ನು ಹಿಂದಿಕ್ಕುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟ್ರ್ಯಾಕ್‌ಗೆ ಸಂಬಂಧಿಸಿದ ಕ್ರೀಡೆಗಳು ವಿಭಿನ್ನವಾಗಿರುತ್ತದೆ. ಇಲ್ಲಿ ಗಮನ ಕೇಂದ್ರೀಕರಿಸುವುದು ಹಾಗೂ ಮಾನಸಿಕ ಸಾಮರ್ಥ್ಯ ಪ್ರಮುಖ ಪಾತ್ರ ವಹಿಸಲಿದೆ. ಆದರೆ ನನ್ನ ಕೋಚ್ ಪ್ರಕಾರ ಜಸ್ಟಿನ್ ಗಾಟ್ಲಿನ್ ಉತ್ತಮ ಓಟಗಾರನಾಗಿದ್ದಾರೆ. ಅಲ್ಲದೆ ಟೈಸನ್ ಗೇ ಹಾಗೂ ಯೋಹಾನ್ ಬ್ಲೇಕ್ ಸೇರಿದಂತೆ ಇತರೆ ಉತ್ತಮ ಯುವ ಓಟಗಾರರು ಆಗಮಿಸುತ್ತಿದ್ದಾರೆ. ಆದರೆ ಯಾರು ನನ್ನನ್ನು ಹಿಂದಿಕ್ಕಲು ಬಿಡುವುದಿಲ್ಲ ಎಂದು ಅವರು ತಿಳಿಸಿದರು.
ಇನ್ನು ಕ್ರಿಕೆಟ್ ಆಟಗಾರರಲ್ಲಿ ಯಾರು ವೇಗವಾಗಿ ಓಡಲಿದ್ದಾರೆ ಎಂಬುದನ್ನು ತಿಳಿಸಿದ ಬೋಲ್ಟ್, ದಕ್ಷಿಣ ಆಫ್ರಿಕಾ ಎಬಿ ಡಿವಿಲಿಯರ್ಸ್ ವೇಗದ ಓಟಗಾರರಾದರೆ ಜಮೈಕಾದ ಕ್ರಿಸ್ ಗೇಯ್ಸ್, ಅತ್ಯಂತ ಮಂದಗತಿಯ ಓಟಗಾರ ಎಂದು ನಕ್ಕರು.