ವಾವ್...ಸೆರೆನಾ
ವಿಶ್ವದ ನಂಬರ್ ಓನ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಯುಎಸ್...
ನ್ಯೂಯಾರ್ಕ್: ವಿಶ್ವದ ನಂಬರ್ ಓನ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ 6-3, 6-3 ನೇರ ಸೆಟ್ಗಳಿಂದ ಡೆನ್ಮಾರ್ಕ್ನ ಕರೊಲಿನೆ ವೋಜ್ನಿಯಾಕಿ ಅವರನ್ನು ಪರಾಭವಗೊಳಿಸಿದರು. ಇದು ಸೆರೆನಾಗೆ ಸತತ ಮೂರನೇ ಹಾಗೂ ಒಟ್ಟಾರೆ 6ನೇ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗದೆ.
ಜೊತೆಗೆ ಅತಿಹೆಚ್ಚು ಗ್ರ್ಯಾನ್ ಸ್ಲಾಮ್ಗಳನ್ನು ಗೆದ್ದು ಸಾಧನೆ ಮಾಡಿರುವ ಮಾಜಿ ದಂತಕತೆಗಳಾದ ಕ್ರಿಸ್ ಎವರ್ಟ್ ಮತ್ತು ಮಾರ್ಟಿನಾ ನ್ರವಾಟಿಲೋವಾ ಅವರ ದಾಖಲೆಯ 18 ಪ್ರಶಸ್ತಿಗಳ ಸಾಧನೆಯನ್ನು ಸರಿಗಟ್ಟಿದ ಸೆರೆನಾ ಜಾಗತಿಕ ಟೆನಿಸ್ ಅಖಾಡದಲ್ಲಿ ಮತ್ತೊಂದು ಹೊಸ ಅಧ್ಯಾಯ ಸೃಷ್ಟಿಸಿದ್ದಾರೆ. ಸದ್ಯ ಸೆರೆನಾ ಅತಿ ಹೆಚ್ಚು ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಗೆದ್ದ ಸಾರ್ವಕಾಲಿಕ ಪಟ್ಟಿಯಲ್ಲಿ ಜಂಟಿ ನಾಲ್ಕನೇ ಸ್ಥಾನದ ಗೌರವ ಪಡೆದಿದ್ದಾರೆ.
ಒಂದು ಗಂಟೆ 15 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದ ಮುಖಾಮುಖಿಯಲ್ಲಿ ಅಮೆರಿಕನ್ ಆಟಗಾರ್ತಿಯು ಎಂದಿನ ತಮ್ಮ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸುವ ಮೂಲಕ 10ನೇ ಶ್ರೇಯಾಂಕಿತೆ ವೋಜ್ನಿಯಾಕಿ ವಿರುದ್ಧ ನಿರೀಕ್ಷಿತ ಗೆಲುವು ಸಂಪಾದಿಸಿದರು.
ಬ್ರಯಾನ್ ಸಹೋದರರ ಶತಕ
ಈ ಮಧ್ಯೆ ಪುರುಷರ ಡಬಲ್ಸ್ ವಿಭಾಗದಲ್ಲಿ ಅಮೆರಿಕದ ಅಗ್ರಶ್ರೇಯಾಂಕಿತ ಜೋಡಿ ಬಾಬ್ ಮತ್ತು ಮೈಕ್ ಬ್ರಯಾನ್ ಸಹೋದರರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ 36 ವರ್ಷ ವಯಸ್ಸಿನ ಅವಳಿ ಸೋದರರು 100 ಎಟಿಪಿ ಡಬಲ್ಸ್ ಪ್ರಶಸ್ತಿ ಗೆದ್ದ ಸಾಧನೆಯೊಂದಿಗೆ ಟೆನಿಸ್ ಭೂಪಟದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ನಿನ್ನೆ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಬಾಬ್ ಮತ್ತು ಮೈಕ್, ಸ್ಪೇನಿನ ಮಾರ್ಸೆಲ್ ಗ್ರ್ಯಾನೊಲ್ಲರ್ಸ್ ಮತ್ತು ಮಾರ್ಕ್ ಲೊಪೆಜ್ ಅವರನ್ನು 6-3, 6-4 ಸೆಟ್ಗಳಿಂದ ಮಣಿಸುವುದರೊಂದಿಗೆ ಒಟ್ಟಾರೆ 5ನೇ ಯುಎಸ್ ಓಪನ್ ಹಾಗೂ 16ನೇ ಪ್ರಮುಖ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು.