ಗಂಭೀರ ಶಿಕ್ಷೆಯಿಂದ ಪಿಸ್ಟೋರಿಯಸ್ ಪಾರು
ಗೆಳತಿ ರೀವಾ ಸ್ಟಿನಾಕಾಂಪ್ರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಬ್ಲೇಡ್ ರನ್ನರ್ ಆಸ್ಕರ್...
ಪ್ರೆಟೋರಿಯಾ: ಗೆಳತಿ ರೀವಾ ಸ್ಟಿನಾಕಾಂಪ್ರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್, ಈ ಪ್ರಕರಣದಲ್ಲಿ ಗಂಭೀರ ಶಿಕ್ಷೆಯಿಂದ ಪಾರಾಗಿದ್ದಾರೆ.
2013ರ ಫೆ.14ರ ಪ್ರೇಮಿಗಳ ದಿನದಂದು ಬೆಳಗಿನ ನಸುಕಿನಲ್ಲಿ ರಿವಾ ಸ್ಟಿನಾಕಾಂಪ್ ಅವರು ಪಿಸ್ಟೋರಿಯಸ್ ಮನೆಯಲ್ಲಿ ಗುಂಡೇಟಿನಿಂದ ಮೃತಪಟ್ಟಿದ್ದರು. ಹಾಗಾಗಿ ಪಿಸ್ಟೋರಿಯಸ್ ಅವರು ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ ಆರೋಪ ಎದುರಿಸಿದ್ದರು.
ಪಿಸ್ಟೋರಿಯಸ್ ಅವರು ಉದ್ದೇಶಪೂರ್ವಕವಾಗಿ ಸ್ಟಿನಾಕಾಂಪ್ ಅವರನ್ನು ಕೊಲೆ ಮಾಡಿರುವುದಾಗಿ ಸಾಬೀತು ಪಡಿಸಲು ಸಾಧ್ಯವಾಗಿಲ್ಲ ಎಂದು ದಕ್ಷಣ ಆಫ್ರಿಕಾ ನ್ಯಾಯಾಲಯ ತೀರ್ಮಾನಿಸಿದೆ. ಹಾಗಾಗಿ ಪಿಸ್ಟೋರಿಯಸ್ ದಂಡನೀಯ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಲಿದ್ದು, ಶಿಕ್ಷೆಯ ಪ್ರಮಾಣ ಹೆಚ್ಚು ಗಂಭೀರವಾಗಿರುವುದಿಲ್ಲ. ಪಿಸ್ಟೋರಿಯಸ್ ಬಾಗಿಲ ಬಳಿ ಇರುವುದು ತನ್ನ ಗೆಳತಿ ಎಂಬುದನ್ನು ಊಹಿಸದೇ ಗುಂಡು ಹಾರಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಉದ್ದೇಶ ಪೂರ್ವಕ ಕೊಲೆ ಪ್ರಕರಣ ಎಂದು ಪರಿಗಣಿಸಲಾಗಿಲ್ಲ. ಹಾಗಾಗಿ ಕೇವಲ ಆಕಸ್ಮಿಕ ಕೊಲೆ ಪ್ರಕರಣವಾಗಿ ತನಿಖೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.