ಪ್ರಶಸ್ತಿ ಸುತ್ತಿಗೆ ಬೆಳಗಾವಿ ಪ್ಯಾಂಥರ್ಸ್
ಹುಬ್ಬಳ್ಳಿ: ಬಿಜಾಪುರ ಬುಲ್ಸ್ ತಂಡದ ವಿರುದ್ಧ 53ರನ್‌ಗಳಿಂದ ಜಯ ಗಳಿಸಿದ ಬೆಳಗಾವಿ ಪ್ಯಾಂಥರ್ಸ್ ಪ್ರಸಕ್ತ ಋತುವಿನ ಕೆಪಿಎಲ್ ಟಿ-20 ಪಂದ್ಯಾವಳಿಯ ಫೈನಲ್ ಹಂತಕ್ಕೆ ತಲುಪಿತು.
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಬೆಳಗಾವಿ ಪ್ಯಾಂಥರ್ಸ್, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 173ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಜಿಟಿಜಿಟಿ ಮಳೆಯಲ್ಲೇ ಬ್ಯಾಟಿಂಗ್‌ಗೇ ಇಳಿದ ಬಿಜಾಪುರ ಬುಲ್ಸ್, 17.2 ಓವರ್‌ಗಳಲ್ಲಿ 120 ರನ್‌ಗಳಿಗೆ ಆಲೌಟಾಗಿ ಸೋಲು ಅನುಭವಿಸಿತು. ಬಿಜಾಪುರ ಬುಲ್ಸ್ ಇನಿಂಗ್ಸ್ ವೇಳೆ 11ನೇ ಓವರ್‌ನಲ್ಲಿ ಎರಡನೇ ಬಾರಿಗೆ ಕಾಲ ಪಂದ್ಯ ಸ್ಥಗಿತಗೊಳಿಸಲಾಯಿತು. ಆಮೇಲೂ ಜಿಟಿಜಿಟಿ ಮಳೆಯಲ್ಲೇ ಆಟ ಮುಂದುವರಿಯಿತು.
ಬ್ಯಾಟಿಂಗ್‌ನಲ್ಲೂ ನಿಶಾಂತ ಸಿಂಗ್ (27) ಹಾಗೂ ಕೆ.ಪಿ. ಅಪ್ಪಣ್ಣ (24) ಮಾತ್ರ ಕೊಂಚ ಪ್ರತಿರೋಧ ತೋರಿದರು. ಆದರೆ ಇತರೆ ದಾಂಡಿಗರು ವೈಫಲ್ಯ ಅನುಭವಿಸಿದರು. ಬೆಳಗಾವಿ ಪ್ಯಾಂಥರ್ಸ್‌ನ ಬಿ.ನವೀನ್ 3.2 ಓವರ್‌ಗಳಲ್ಲಿ 13 ರನ್ ನೀಡಿ 4 ವಿಕೆಟ್ ಕಬಳಿಸಿ, ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇದಕ್ಕೂ ಮುನ್ನ ಬೆಳಗಾವಿ ಫ್ಯಾಂಥರ್ಸ್ ಬ್ಯಾಟ್ ಮಾಡುತ್ತಿದ್ದಾಗಲೂ 13ನೇ ಓವರ್‌ನಲ್ಲಿ ಏಕಾಏಕಿ ಮಳೆಯಾಗಿ 40 ನಿಮಿಷಗಳ ಆಟಕ್ಕೆ ಅಡ್ಡಿಯಾಗಿತ್ತು. ಬೆಳಗಾವಿ ಪ್ಯಾಂಥರ್ಸ್‌ನ ಸುನೀಲ್ ರಾಜು 57 ರನ್, ಕೆ.ಗೌತಮ್ 31, ಕೆ.ಅಬ್ಬಾಸ್ 24 ಹಾಗೂ ಭರತ್ ಚಿಪ್ಲಿ 18ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.