ಸರ್ಬಿಯಾಗೆ ಭಾರತ ಸಡ್ಡು
ಬೆಂಗಳೂರು: ಆರಂಭದ ಹಿನ್ನಡೆಯಿಂದ ಧೃತಿಗೆಡದೇ ತನ್ನೊಳಗಿನ ಸಾಮರ್ಥ್ಯವನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಧಾರೆಯರೆಯುವ ಮೂಲಕ ಅದಕ್ಕೆ ತಕ್ಕ ಪ್ರತಿಫಲವನ್ನೇ ಸಂಪಾದಿಸಿದ ಸೋಮದೇವ್ ದೇವವರ್ಮನ್, ಡೇವಿಸ್ ಕಪ್ ವಿಶ್ವ ಗುಂಪಿಗೆ ಅರ್ಹತೆ ಪಡೆಯುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ.
ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಭಾನುವಾರ ನಡೆದ ವಿಶ್ವ ಗುಂಪಿನ ಪ್ರೇ ಆಫ್ ಹಂತದ ಮೊದಲ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ಸೋಮದೇವ್ ದೇವವರ್ಮನ್ 1-6, 6-4, 4-6, 6-3, 6-2 ಸೆಟ್‌ಗಳಿಂದ ಸರ್ಬಿಯಾ ತಂಡದ ಅಗ್ರಮಾನ್ಯ ಆಟಗಾರ ಡುಸಾನ್ ಲಾಯೊಚ್ ಅವರನ್ನು ಸದೆಬಡಿದರು.
ಈ ಗೆಲುವಿನೊಂದಿಗೆ ಭಾರತ, ಐದು ಪಂದ್ಯಗಳ ಮುಖಾಬಲದಲ್ಲಿ ಸರ್ಬಿಯಾ ಎದುರು 2-2ರಿಂದ ಸಮಗೌರವ ಸಾಧಿಸಿತು. ಎರಡನೇ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ಯುಕಿ ಭಾಂಬ್ರಿ ಅವರು, ಫಿಲಪ್ ಕ್ರಾಜಿನೋಚ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರೆ, ಭಾರತ ತಂಡ ನಾಲ್ಕು ವರ್ಷಗಳ ನಂತರ ಮತ್ತೆ ವಿಶ್ವ ಗುಂಪಿಗೆ ಪ್ರವೇಶಿಸಿದ ಸಾಧನೆ ಮಾಡಲಿದೆ.
ಮೂರು ಗಂಟೆ 37 ನಿಮಿಷಗಳ ಕಾಲ ನಡೆದ ಐದು ಸೆಟ್‌ಗಳ ರೋಚಕ ಹೋರಾಟದಲ್ಲಿ ಸೋಮದೇವ್ ಮತ್ತು ಡುಸಾನ್ ಅದ್ಭುತ ಪ್ರದರ್ಶನವನ್ನೇ ನೀಡಿದರು. ಆದರೆ, ಪಂದ್ಯ ಸಾಗಿದಂತೆ ಭಾರತೀಯ ಆಟಗಾರ ಅದ್ಭುತ ಲಯ ತೋರುವ ಮೂಲಕ ಎದುರಾಳಿ ಆಟಗಾರನನ್ನು ಬೆಚ್ಚಿ ಬೀಳಿಸಿದರು. ವಿಶ್ವ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ತಮಗಿಂತಲೂ 83 ಸ್ಥಾನ ಮುಂದಿರುವ ಡುಸಾನ್ ವಿರುದ್ಧ ಸೋಮದೇವ್ ಕೆಚ್ಚೆದೆಯಿಂಜ ಹೋರಾಡಿದರು. 29 ನಿಮಿಷಗಳವರೆಗೆ ನಡೆದ ಮೊದಲ ಸೆಟ್‌ನಲ್ಲಿ ಭಾರತೀಯ ಆಟಗಾರನಿಗೆ ತನ್ನ ಒಂದು ಸರ್ವ್ ಉಳಿಸಿಕೊಳ್ಳಲು ಮಾತ್ರ ಸಾಧ್ಯವಾಗಿತ್ತು.
ಆದರೆ ಎರಡನೇ ಸೆಟ್‌ನಲ್ಲಿ ಡುಸಾನ್‌ರ ಹತ್ತನೇ ಗೇಮ್ ಬ್ರೇಕ್ ಮಾಡುವ ಮೂಲಕ ಎದುರಾಳಿ ಜೊತೆ ಸಮಗೌರವ ಸಾಧಿಸಿದ ಸೋಮದೇವ್, ಮೈಕೊಡವಿ ಮೇಲೆದ್ದು ಬಂದರು. ಆದರೂ ಮೂರನೇ ಸೆಟ್‌ನಲ್ಲಿ ಮತ್ತೆ ಹಳೆಯ ತಪ್ಪುಗಳನ್ನೇ ಮುಂದುವರಿಸಿದ ಪರಿಣಾಮ ಪುನಃ ಹಿನ್ನಡೆ ಅನುಭವಿಸಿದರು.
-ಮೈಲಾರಲಿಂಗ ದಿಂಡಲಕೊಪ್ಪ