ದುಷ್ಯಂತ್‌ಗೆ ಕಂಚಿನ ಹಾರ
ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿದ್ದ ಗಾಳಿಯ ನಡುವೆ ಉತ್ತಮ ಪ್ರದರ್ಶನ ನೀಡಿದ ಭಾರತದ....
ಇಚಾಂನ್: ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿದ್ದ ಗಾಳಿಯ ನಡುವೆ ಉತ್ತಮ ಪ್ರದರ್ಶನ ನೀಡಿದ ಭಾರತದ ಯುವ ರೋಯಿಂಗ್ ಪಟು ದುಷಿಯಂತ್ ದುಷ್ಯಂತ್ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆಯುವ ಅವಕಾಶ ಕಳೆದುಕೊಂಡರೂ, ಕಂಚಿ ನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ,
ಬುಧವಾರ ನಡೆದ ಪುರುಷರ ಲೈಟ್‌ವೇಟ್ ಸಿಂಗಲ್ಸ್ ಸ್ಕಲ್ಸ್‌ನ ಫೈನಲ್‌ನಲ್ಲಿ ದುಷ್ಯಂತ್ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸುತ್ತಿನಲ್ಲಿ 21 ವರ್ಷದ ದುಷ್ಯಂತ್ 2000 ಮೀಟರ್ ಅನ್ನು ಏಳು ನಿಮಿಷ 26.57 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಇನ್ನು ಹಾಂಕಾಂಗ್‌ನ ಹೋಯ್ ಕ್ವಾನ್ ಲೊಕ್ ಚಿನ್ನದ ಪದಕ ಪಡೆದರೆ, ದಕ್ಷಿಣ ಕೊರಿಯಾದ ಹಕ್ಬೆಮ್ ಲೀ ಬೆಳ್ಳಿಪದಕ ಪಡೆದರು.
ಆರಂಭಿಕ 500 ಮೀಟರ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದ ದುಷ್ಯಂತ್, ನಂತರ 1.21 ಸೆಕೆಂಡ್‌ಗಳ ಅಂತರದಲ್ಲಿ ಅಗ್ರಸ್ಥಾನದಲ್ಲಿ ಮುನ್ನಡೆ ಪಡೆದರು. ಇನ್ನು ರೇಸ್ ಮುಕ್ತಾಯಕ್ಕೆ ಕೇವಲ 200 ಮೀಟರ್ ಬಾಕಿ ಇರುವಾಗ ದುಷ್ಯಂತ್ ಇದ್ದ ಲೇನ್ ಬಳಿ ತೀವ್ರವಾಗಿ ಗಾಳಿ ಬೀಸಿದ ಪರಿಣಾಮ ತಮ್ಮ ಮುನ್ನಡೆಯನ್ನು ಕಳೆದುಕೊಂಡು ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಯಿತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ದುಷ್ಯಂತ್ ಚಿನ್ನದ ಪದಕ ಪಡೆಯುವ ವಿಶ್ವಾಸದಲ್ಲಿದ್ದೆ. ನನ್ನ ಲೇನ್ ಬಳಿ ಗಾಳಿ ತೀವ್ರತೆ ಹೆಚ್ಚಾಗಿತ್ತು. ಹಾಗಾಗಿ ನಿಯಂಕ್ರಣ ಕಳೆದುಕೊಳ್ಳಬೇಕಾಯಿತು. ಆದರೂ ಕಂಚಿನ ಪದಕ ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ. ಬುಧವಾರ ಸ್ಪರ್ಧೆಗಳ ಪೈಕಿ ಭಾರತಕ್ಕೆ ಈ ಒಂದು ಪದಕ ಲಭಿಸಿದ್ದು ಬಿಟ್ಟರೆ ಉಳಿದಂತೆ ನಿರಾಶಾದಾಯಕ ದಿನವಾಗಿತ್ತು.
ಕೈತಪ್ಪಿದ ಪದಕ: ಇನ್ನು ಡಬಲ್ಸ್ ಸ್ಕಲ್ಸ್‌ನ ಫೈನಲ್‌ನಲ್ಲಿ ರೂಪೇಂದ್ರ ಸಿಂಗ್ ಮತ್ತು ಮನ್‌ಜಿತ್ ಸಿಂಗ್ 4ನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ವಂಚಿತರಾದರು. ಮಹಿಳೆಯರ ಡಬಲ್ಸ್ ಸ್ಕಲ್ಸ್‌ನ ಫೈನಲ್‌ನಲ್ಲಿ ಸಂಜುಕ್ತಾ ದುಂಗ್ ಮತ್ತು ತರುಣಿಕ ಪ್ರತಾಪ್ ಜೋಡಿ ಫೈನಲ್ ಸುತ್ತಿನಲ್ಲಿ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.
ದುಷ್ಯಂತ್ ರೋಯಿಂಗ್ ಕ್ರೀಡೆಯನ್ನು ಆಡಲು ಪ್ರಾರಂಭಿಸಿದ್ದು 2012ರಿಂದ ಎಂಬುದು ಅಚ್ಚರಿಯ ಸಂಗತಿ. ಹರ್ಯಾಣ ಮೂಲದ ಸೇನೆಯ ರೋವರ್ ಆಗಿರುವ ದುಷ್ಯಂತ್ ಅವರ ದೈಹಿಕ ಸಾಮರ್ಥ್ಯವನ್ನು ಕಂಡ ಆತನ ಕೋಚ್ ಸನ್ನಿ ಸಿಂಗ್, ರಯಿಂಗ್ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ನಂತರ ರೋಯಿಂಗ್ ಅಭ್ಯಾಸ ಮಾಡಿದ ದುಷ್ಯಂತ್ ಎರಡು ವರ್ಷ ಅಂತರದಲ್ಲಿ ಪದಕದ ಸಾಧನೆ ಮಾಡಿರುವುದು ವಿಶೇಷ.