ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡಬಲ್ ಟ್ರ್ಯಾಪ್‌ನಲ್ಲಿ ವನಿತೆಯರಿಗೆ ಕಂಚು

ಭಾರತದ ಮಹಿಳೆಯರು ಏಷ್ಯನ್ ಕ್ರೀಡಾಕೂಟದ ಶೂಟಿಂಗ್ ವಿಭಾಗದ...

Lingaraj Badiger
Updated On : 26 Sept 2014, 11:01 am

ಇಂಚಾನ್: ಭಾರತದ ಮಹಿಳೆಯರು ಏಷ್ಯನ್ ಕ್ರೀಡಾಕೂಟದ ಶೂಟಿಂಗ್ ವಿಭಾಗದ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಗುರುವಾರ ನಡೆದ ಸ್ಪರ್ಧೆಯಲ್ಲಿ ಶಾನ್ ಚೌಧರಿ, ಶ್ರೇಯಸಿ ಸಿಂಗ್ ಮತ್ತು ವರ್ಷಾ ವರ್ಮನ್ ಒಳಗೊಂಡ ಭಾರತ ತಂಡ ಒಟ್ಟು 279 ಅಂಕಗಳಿಸಿ ಮೂರನೇ ಸ್ಥಾನ ಪಡೆದು ಈ ಪದಕಕ್ಕೆ ಅರ್ಹವಾಯಿತು. ಚೀನಾ ಮತ್ತು ಆತಿಥೇಯ ದಕ್ಷಿಣ ಕೊರಿಯಾ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಹಂಚಿಕೊಂಡವು.

ಶಾನ್ ಚೌಧರಿ ಕ್ರಮವಾಗಿ 24, 25, 24, 23ರಂತೆ ಅಂಕ ಸಂಪಾದಿಸಿದರೆ, ಶ್ರೇಯಸಿ ಸಿಂಗ್ 24, 22, 22, 26 ಹಾಗೂ ವರ್ಷಾ 23, 21, 24, 21,ರಂತೆ ಅಂಕಗಳಿಸಿದರು. ಶಾನ್ 120 ಶೂಟ್‌ಗಳಲ್ಲಿ ಸರಾಸರಿ 96ರ ಸಾಧನೆ ಮಾಡಿ ಒಟ್ಟು 19 ಮಂದಿಯ ಪೈಕಿ 98 ಅಂಕಗಳಿಸುವ ಮೂಲಕ 10ನೇ ಸ್ಥಾನ ಪಡೆದರೆ, ಇವರಿಗಿಂತಲೂ ಕಡಿಮೆ ಸಾಧನೆ ಮಾಡಿದ ವರ್ಷಾ 89 ಅಂಕಗಳಿಸಲಷ್ಟೇ ಶಕ್ತರಾದರು.

ಇದರೊಂದಿಗೆ ಭಾರತ, ಇಂಚಾನ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲಿ 7ನೇ ಪದಕ ಗೆದ್ದ ಸಾಧನೆ ಮಾಡಿತು.

ಪುರುಷರ ತಂಡಕ್ಕೆ 4ನೇ ಸ್ಥಾನ
ಇಂದೇ ನಡೆದ 50 ಮೀಟರ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಭಾರತದ ಗುರಿಕಾರರು ನಿರಾಶಾದಾಯಕ ಪ್ರದರ್ಶನ ನೀಡುವುದರೊಂದಿಗೆ 4ನೇ ಸ್ಥಾನ ಪಡೆದು ಪದಕದಿಂದ ವಂಚಿತರಾದರು. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗಗನ್ ನಾರಂಗ್, ಜಾಯ್‌ದೀಪ್ ಕೌರ್ ಮತ್ತು ಹರಿಯೋವ್ ಸಿಂಗ್ ಒಳಗೊಂಡ ಭಾರತ ತಂಡ ಉತ್ತಮ ಗುರಿ ನೀಡುವಲ್ಲಿ ವಿಫಲವಾಗಿ ಕನಿಷ್ಠ ಕಂಚಿನ ಪದಕ ಗೆದ್ದುಕೊಳ್ಳುವ ಅವಕಾಶವನ್ನೂ ಕೈ ಚೆಲ್ಲಿತು.

ವೈಯಕ್ತಿಕ ವಿಭಾಗದಲ್ಲಿ ಫೈನಲ್ ಪ್ರವೇಶಿಸುವಲ್ಲಿಯೂ ಈ ಆಟಗಾರರು ವಿಫಲರಾಗಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಕರ್ಮಾಕರ್, ಇಲ್ಲಿ 10ನೇ ಸ್ಥಾನಕ್ಕೆ ತೃಪ್ತರಾದರೆ, ಗಗನ್ ನಾರಂಗ್ ಮತ್ತು ಹರಿಯೋವ್ ಕ್ರಮವಾಗಿ 14ನೇ ಮತ್ತು 29ನೇ ಸ್ಥಾನಗಳಿಗಷ್ಟೇ ಸಮಾಧಾನಗೊಂಡರು. ಚೀನಾ ಚಿನ್ನದ ಪದಕ ಗೆದ್ದರೆ, ದಕ್ಷಿಣ ಕೊರಿಯಾ ಬೆಳ್ಳಿ ಪದಕಕ್ಕೆ ಭಾಜನವಾಯಿತು.

ಸ್ಟ್ಯಾಂಡರ್ಡ್ ಪಿಸ್ತೂಲ್‌ನಲ್ಲಿ 5ನೇ ಸ್ಥಾನ
ಪುರುಷರ ಸ್ಟ್ಯಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಗುರಿಕಾರರು 5ನೇ ಸ್ಥಾನ ಪಡೆದು ಪದಕದ ಆಸೆ ಕೈ ಬಿಟ್ಟಿದ್ದಾರೆ. ಭಾರತ ತಂಡ ಪ್ರತಿನಿಧಿಸಿದ್ದ ಗುರುಪ್ರೀತ್ ಸಿಂಗ್, ಮಹಾವೀರ್ ಸಿಂಗ್ ಮತ್ತು ಸಮರೇಶ್ ಜಂಗ್ ಎಂದಿನ ತಮ್ಮ ಉತ್ತಮ ಗುರಿ ನೆಡುವಲ್ಲಿ ವೈಫಲ್ಯ ಅನುಭವಿಸಿದ್ದರಿಂದ ಪದಕದಿಂದ ದೂರ ಉಳಿಯಬೇಕಾಯಿತು. ವೈಯಕ್ತಿಕ ಸಮರದಲ್ಲಿ ಗುರುಪ್ರೀತ್ 5ನೇ, ಮಹಾವೀರ್ 17ನೇ ಮತ್ತು ಹಿರಿಯ ಶೂಟರ್ ಸಮರೇಶ್ 24ನೇ ಸ್ಥಾನಕ್ಕೆ ಸಮಾಧಾನಗೊಂಡಿದ್ದರು. ಚೀನಾ ಚಿನ್ನ, ದಕ್ಷಿಣ ಕೊರಿಯಾ ಬೆಳ್ಳಿ ಹಾಗೂ ಸಿಂಗಾಪುರ ಕಂಚಿನ ಪದಕಗಳನ್ನು ಗಳಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement