ಧೋನಿ @ ಫಸ್ಟ್ ಲುಕ್
ಕಳೆದ ಒಂದು ತಿಂಗಳಿನಿಂದ ಧೋನಿ ಆತ್ಮಚರಿತ್ರೆ ಕುರಿತ ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗಾಳಿಸುದ್ದಿ ಹರಿದಾಡಿತ್ತಾದರೂ ...
ಕಳೆದ ಒಂದು ತಿಂಗಳಿನಿಂದ ಧೋನಿ ಆತ್ಮಚರಿತ್ರೆ ಕುರಿತ ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗಾಳಿಸುದ್ದಿ ಹರಿದಾಡಿತ್ತಾದರೂ , ಈಗ ಧೋನಿ ಕುರಿತ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿರುವ ಮಹಿ ಪತ್ನಿ ಸಾಕ್ಷಿ, ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಗುರುವಾರ ತಮ್ಮ ಟ್ವಿಟರ್ನಲ್ಲಿ ಚಿತ್ರದ ಪೋಸ್ಟರ್ನ್ನು ಪ್ರಕಟಿಸಿರುವ ಸಾಕ್ಷಿ, ಕಳೆದ ಕೆಲವು ದಿನಗಳಿಂದ ಕಂಡುಬಂದ ಎಲ್ಲ ಗೊಂದಲಗಳಿಗೆ ಇಲ್ಲಿ ಸ್ಪಷ್ಟನೆ ನೀಡುತ್ತಿದ್ದೇನೆ. ಇಷ್ಟು ದಿನಗಳು ಬಂದಿದ್ದೆಲ್ಲಾ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ.
ನೀರಜ್ ಪಾಂಡೆ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಧೋನಿ ಪಾತ್ರವನ್ನು ನಟ ಸುಶಾಂತ್ ಸಿಂಗ್ ರಜಪೂತ್ ನಿರ್ವಹಿಸಲಿದ್ದಾರೆ. ಈ ಚಿತ್ರವನ್ನು ಧೋನಿ ಸಹ ಮಾಲೀಕತ್ವದ ರಿತಿ ಸ್ಫೋರ್ಟ್ಸ್ ಸಮೂಹದ ಭಾಗವಾಗಿರುವ ಇನ್ಸ್ಪೈಯರ್ಡ್ ಎಂಟರ್ಟೇನ್ಮೆಂಟ್ ನಿರ್ಮಿಸಲಿದೆ.
ಈ ಚಿತ್ರ ಧೋನಿ ರಾಂಚಿಯಿಂದ ಭಾರತ ಕ್ರಿಕೆಟ್ ತಂಡದ ನಾಯಕನಾದ ಹಾದಿಯನ್ನು ಚಿತ್ರಿಸಲಿದೆ ಎಂಬ ಮಾತು ಕೇಳಿ ಬಂದಿದೆ. ಇನ್ನು ಚಿತ್ರದಲ್ಲಿ ಧೋನಿ ಖಾಸಗಿ ಜೀವನ ಅಂಶವೂ ಮೂಡಿಬರಲಿದ್ದು, ಖ್ಯಾತ ನಟಿ ದೀಪಿಕಾ ಪಡುಕೋಣೆ ಅಥವಾ ಶ್ರದ್ಧಾ ಕಪೂರ್ ಧೋನಿ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಮಾತಿದೆಯಾದರೂ ಈ ಕುರಿತು ಅಧಿಕೃತ ಮಾಹಿತಿ ಹೊರಬಂದಿಲ್ಲ.