ಕ್ರೀಡೆ

ಮಲೇಷ್ಯಾ ಮೇಲೆ ಸವಾರಿ ಅಗತ್ಯ

Vishwanath S

ಇಫೋ(ಮಲೇಷ್ಯಾ): ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಎರಡು ಪಂದ್ಯಗಳು ಕಳೆದರೂ ಒಂದೂ ಜಯದ ರುಚಿ ನೋಡದ ಭಾರತ ತಂಡಕ್ಕೆ ಈಗ ಮೂರನೇ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾ ವಿರುದ್ಧ ಗೆಲವು ಅಗತ್ಯವಾಗಿದೆ.

ರೌಂಡ್ ರಾಬಿನ್ ಲೀಗ್ ಸುತ್ತಿನಲ್ಲಿ ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿದ್ದ ಭಾರತ, ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 1-2 ಗೋಲುಗಳಿಂದ ಸೋಲುಂಡಿತು. ಬುಧವಾರ ನಡೆಯಲಿರುವ ಮೂರನೇ ಪಂದ್ಯದಲ್ಲಿ ಮಲೇಷಿಯಾವನ್ನು ಎದುರಿಸಲಿರುವ ಸರ್ದಾರ್ ಸಿಂಗ್ ನಾಯಕತ್ವದ ಭಾರತ ಗೆಲವು ದಾಖಲಿಸಿ ಫೈನಲ್ ಆಸೆ ಹೆಚ್ಚಿಸಿಕೊಳ್ಳಬೇಕಾಗಿದೆ.

ನೂತನ ಕೋಚ್, ಹಾಲೆಂಡ್ ಮೂಲದ ಪಾಲ್ ವ್ಯಾಸ್ ಅಸ್ ಅಡಿಯಲ್ಲಿ ಮೊದಲ ಗೆಲವಿನ ನಿರೀಕ್ಷೆಯಲ್ಲಿರುವ ಭಾರತದ ಆಟಗಾರರು ಮಲೇಷ್ಯಾವನ್ನು ಮಣಿಸುವ ಅತ್ಯುತ್ಸಾಹದಲ್ಲಿದ್ದಾರೆ. ಈವರೆಗೆ ಭಾರತ ಈ ಟೂರ್ನಿಯಲ್ಲಿ ಮೂರು ಗೋಲುಗಳನ್ನು ಸಂಪಾದಿಸಿದ್ದು, ನಿಕ್ಕಿನ್ ತಿಮ್ಮಯ್ಯ, ವಿ.ಆರ್. ರಘುನಾಥ್ ಮತ್ತು ಆಕಾಶದೀಪ್ ತಲಾ ಒಂದೊಂದು ಗೋಲು ಗಳಿಸಿದ್ದಾರೆ. ಇತರೆ ಆಟಗಾರರೂ ಸಹ ನಾಳಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನಕ್ಕೆ ಅಣಿಯಾದಲ್ಲಿ ಸರ್ದಾರ್ ಸಿಂಗ್ ಪಡೆಗೆ ಮೊದಲ ಜಯ ದಕ್ಕಲು ಸಾಧ್ಯ.

ವಿಶ್ವ ರ್ಯಾಂಕಿಂಗ್‍ನಲ್ಲಿ ಭಾರತ, ಮಲೇಷ್ಯಾಗಿಂತಲೂ ಮೂರು ಸ್ಥಾನ ಮೇಲಿದೆ. ಭಾರತ 9ನೇ ರ್ಯಾಂಕ್ ಹೊಂದಿದ್ದರೆ, ಮಲೇಷ್ಯಾ12ನೇ ರ್ಯಾಂಕ್‍ನಲ್ಲಿದೆ. ಆದರೆ, ಈ ರ್ಯಾಂಕ್ ಮೇಲೆಯೇ ಫಲಿತಾಂಶ ನಿರ್ಧರಿಸಲು ಸಾಧ್ಯವಿಲ್ಲ. ಪಂದ್ಯದ ದಿನ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರಿಗೆ ಗೆಲ್ಲುವ ಅವಕಾಶಗಳು ಹೆಚ್ಚಿರುತ್ತವೆ. ಭಾರತದ ತಂಡದಲ್ಲಿ ಗಾಯದ ಸಮಸ್ಯೆ ಚಿಂತೆಯಾಗಿದೆ. ಯುವ ಆಟಗಾರ ಮಂದೀಪ್ ಸಿಂಗ್, ಕೊರಿಯಾ ವಿರುದ್ಧ ಪಂದ್ಯದಲ್ಲಿ ಹಿಮ್ಮಡಿ ನೋವಿಗೆ ಒಳಗಾಗಿರುವ ಕಾರಣ ಎರಡನೇ ಪಂದ್ಯದಿಂದ ಹೊರಗುಳಿದಿದ್ದರು. ಇನ್ನೂ ಕೆಲವು ದಿನ ಅವರಿಗೆ ವಿಶ್ರಾಂತಿಯ ಅಗತ್ಯವಿರುವುದರಿಂದ ಮಲೇಷ್ಯಾ ವಿರುದ್ಧದ ಪಂದ್ಯಕ್ಕೂ ಲಭ್ಯರಿಲ್ಲ.

ಹಿಂದಿನ ಪಂದ್ಯಗಳಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಬೇಕಾಗಿದೆ. ಪ್ರಮುಖವಾಗಿ ಮುನ್ಪಡೆ ವಿಭಾಗ ಹೆಚ್ಚಿನ ಜವಾಬ್ದಾರಿ ಹೊರಬೇಕಾಗಿದೆ ಎಂದು ನಾಯಕ ಸರ್ದಾರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಮತ್ತೊಂದೆಡೆ ಮಲೇಷ್ಯಾ ಆಟಗಾರರೂ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲುಂಡಿದ್ದು ಸಾಕಷ್ಟು ಒತ್ತಡದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 2-4 ಗೋಲುಗಳಿಂದ ಹಾಗೂ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-3 ಗೋಲುಗಳಿಂದ ಆಘಾತ ಅನುಭವಿಸಿದ್ದ ಮಲೇಷ್ಯಾ, ಭಾರತವನ್ನು ಮಣಿಸಿ ಮೊದಲ ಜಯ ತನ್ನ ತೆಕ್ಕೆಗೆ ಹಾಕಿಕೊಳ್ಳುವ ವಿಶ್ವಾಸದಲ್ಲಿದೆ. ಹಾಗಾಗಿ, ಭಾರತಕ್ಕೆ, ಆತಿಥೇಯರಿಂದ ಕಠಿಣ ಸವಾಲು ಎದುರಾದರೆ ಅಚ್ಚರಿಯಿಲ್ಲ.

SCROLL FOR NEXT