ಹರ್ಯಾಣ: ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿನ ಕ್ರೀಡಾಪಟುಗಳನ್ನು ನಮ್ಮ ಸರ್ಕಾರ, ಸಮಾಜ ಯಾವ ರೀತಿ ನಿರ್ಲಕ್ಷಿಸುತ್ತವೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ.
ರಿಶು ಮಿತ್ತಲ್ ಎಂಬ ಹರ್ಯಾಣ ರಾಜ್ಯದ ಚಾಂಪಿಯನ್ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಾಳೆ. ರಾಜ್ಯಮಟ್ಟದ ಟೂರ್ನಿಯಲ್ಲಿ ಬಂಗಾರದ ಪದಕ ಸ್ಪರ್ಶಿಸಿದ್ದ ಕೈಗಳು, ಮನೆಗಳಲ್ಲಿ ಮುಸುರೆ ತಿಕ್ಕಿ, ನೆಲ ಒರೆಸುತ್ತಿವೆ. ಹೀಗೆ ಬಂದ ಸಂಪಾದನೆಯಲ್ಲಿ ತನ್ನ ಜೀವನ, ವಿದ್ಯಾಭ್ಯಾಸ ಜೊತೆಗೆ ಕ್ರೀಡಾಬದುಕಿಗಾಗಿ ಖರ್ಚುಗಳನ್ನು ನಿಭಾಯಿಸುತ್ತಿದ್ದಾಳೆ.
ಸದ್ಯಕ್ಕೆ ಹರ್ಯಾಣದ ಶಾಲೆಯೊಂದರಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ರಿಶು, ಮೂಲತಃ ಹರ್ಯಾಣದ ಕೈತಾಳ್ ಊರಿನವಳು. ಆಕೆಯ ಅಣ್ಣ ನಗರದ ಪುಟ್ಟ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಈಕೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾಳೆ. ಹಾಗಾಗಿ, ಕೆಲವು ವರ್ಷಗಳ ಹಿಂದೆಯೇ ಅಣ್ಣನ ಆಶ್ರಯಕ್ಕೆ ಬಂದಿರುವ ರಿಶು, ಆತನೊಂದಿಗೆ ಒಂದು ಪುಟ್ಟ ರೂಮಿನಲ್ಲಿ ಜೀವನ ಸಾಗಿಸುತ್ತಿದ್ದಾಳೆ. ಬೆಳಗ್ಗೆ ಮನೆಗೆಲಸ, ನಂತರ ಶಾಲೆ ಆ ಬಳಿಕ ಸಂಜೆ ಬಾಕ್ಸಿಂಗ್ ಅಭ್ಯಾಸಕ್ಕೆ ಅಣಿಯಾಗುತ್ತಾಳೆ.
ಚಿಕ್ಕಂದಿನಿಂದಲೇ ಬಾಕ್ಸಿಂಗ್‍ನಲ್ಲಿ ಅಪಾರ ಶ್ರದ್ಧೆ ಹೊಂದಿದ್ದ ಆಕೆ, 2012 ಹಾಗೂ 2013ರಲ್ಲಿ ಕಂಚಿನ ಪದಕ ಗೆದ್ದಿದ್ದಾಳೆ. 2014ರ ಕಿರಿಯರ ರಾಜ್ಯಮಟ್ಟದ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 46 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾಳೆ. ಅಲ್ಲದೆ, ಕಳೆದ ಡಿಸೆಂಬರ್ ನಲ್ಲಿ ಗ್ವಾಲಿಯರ್ ನಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಹರ್ಯಾಣವನ್ನು ಪ್ರತಿನಿಧಿಸಿದ್ದಾಳೆ. ಆದರೆ, ಈ ಸಾಧನೆಗಳು ಆಕೆಯ ನೆರವಿಗೆ ಬಂದಿಲ್ಲ ಎಂದು ಆಕೆಯ ಕೋಚ್ ರಾಜಿಂದರ್ ಸಿಂಗ್ ಹೇಳುತ್ತಾರೆ.
ರಿಶು ಮಿತ್ತಲ್ ಕೂಡ ಬಾಕ್ಸಿಂಗ್ ಅಖಾಡದಲ್ಲಿ ಮೇರಿ ಕೋಮ್ ರಂತೆ ಮಿಂಚಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ದೊಡ್ಡ ಕನಸನ್ನೇ ಕಟ್ಟಿಕೊಂಡಿದ್ದಾಳೆ. ಆದರೆ, ಬಡತನದ ಸಮಸ್ಯೆ ಈಕೆಗೆ ಚಿಂತೆಯಾಗಿದೆ.
ಮೇರಿ ಭರವಸೆ: ಬಡತನದಲ್ಲಿರುವ ರಿಶು ಮಿತ್ತಲ್ ವರದಿಗಳು ಮಂಗಳವಾರ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಸ್ಪಂದಿಸಿದ ಒಲಿಂಪಿಕ್ಸ್ ಪದಕ ವಿಜೇತೆ ಮೇರಿ ಕೋಂ, ರಿಶು ಅವರಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.