ಚೆನ್ನೈ: ಅಲ್ಬಿ ಮಾರ್ಕೆಲ್‍ರವರ ಅಮೋಘ ಬ್ಯಾಟಿಂಗ್‍ನ ಹೊರತಾಗಿಯೂ (ಅಜೇಯ 73 ರನ್, 55 ಎಸೆತ) ಡೆಲ್ಲಿ ಡೇರ್‍ಡೆವಿಲ್ಸ್ ತಂಡ, ಗುರುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ ಪಂದ್ಯದಲ್ಲಿ ಕೇವಲ 1 ರನ್ ಅಂತರದ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, 20 ಓವರ್ ಗಳಲ್ಲಿ 7 ವಿಕೆಟ್‍ಗೆ 150 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ತಂಡ, 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸುವಷ್ಟೇ ಶಕ್ತವಾಯಿತು. ಚೆನ್ನೈ ತಂಡದ ಈ ಯಶಸ್ಸಿನಲ್ಲಿ ತಂಡದ ಮಧ್ಯಮ ವೇಗಿ ಆಶಿಶ್ ನೆಹ್ರಾ ಪ್ರಮುಖ ಪಾತ್ರ ವಹಿಸಿದರು.
ಡೆಲ್ಲಿ ಪಡೆಯ ಆರಂಭಿಕರಾದ ಮಾಯಾಂಕ್ ಅಗರ್ವಾಲ್ ಹಾಗೂ ಸಿಎಂ ಗೌತಮ್ ಅವರ ವಿಕೆಟ್‍ಗಳನ್ನು ಕೇವಲ 20 ರನ್ ಗಳಾಗುವಷ್ಟರಲ್ಲಿ ಉರುಳಿಸಿದ ಅವರು, ಆನಂತರ ಚೊಚ್ಚಲ ಬಾರಿ ಐಪಿಎಲ್‍ಗೆ ಕಾಲಿಟ್ಟಿದ್ದ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಕೆಡವಿದರು. ನೆಹ್ರಾ ದಾಳಿಯೊಂದಿಗೆ ತಾವೂ ಆಕ್ರಮಣಕ್ಕಿಳಿದ ಡ್ವೈನ್ ಬ್ರಾವೊ ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರ ಯುವರಾಜ್ ಸಿಂಗ್ ಹಾಗೂ ಇಮ್ರಾನ್ ತಾಹಿರ್ ಅವರನ್ನು ಪೆವಿಲಿಯನ್‍ಗೆ ಅಟ್ಟಿದರು.
ಮಾರ್ಕೆಲ್ ವೀರೋಚಿತ ಹೋರಾಟ: ಚೆನ್ನೈ ತಂಡದ ಬೌಲಿಂಗ್ ದಾಳಿಗೆ ಎದೆಯೊಡ್ಡಿ ಶತಾಯ ಗತಾಯ ತಂಡವನ್ನು ಗೆಲ್ಲಿಸಲೇಬೇಕೆಂಬ ಛಲದಲ್ಲಿ ಆಡಿದ್ದು ಅಲ್ಬಿ ಮಾರ್ಕೆಲ್. ಆರಂಭಿಕ ಸಿಎಂ ಗೌತಮ್ ವಿಕೆಟ್ ಉರುಳಿದಾಗ ಕ್ರೀಸ್‍ಗೆ ಕಾಲಿಟ್ಟ ಅವರು, ಕೊನೆಯವರೆಗೂ ವೀರೋಚಿತ ಹೋರಾಟ ನೀಡಿದರು. ಧೋನಿ ಪಡೆಯ ಬೌಲಿಂಗ್ ಅಸ್ತ್ರವನ್ನು ದಿಟ್ಟತನದಿಂದ ಎದುರಿಸಿದ ಅವರು, ಅರ್ಧ ಶತಕ ಗಳಿಸಿದರಲ್ಲದೆ ತಂಡದ ಗೆಲವಿನ ಸೌಧ ಕಟ್ಟಲು ಟೊಂಕ ಕಟ್ಟಿ ನಿಂತರು. ಆದರೆ, ಅವರಿಗೆ ತಂಡದ ಯಾವೊಬ್ಬ ಬ್ಯಾಟ್ಸ್ ಮನಿಂದ ಸರಿಯಾದ ಸಾಥ್ ಸಿಗಲಿಲ್ಲ.
ಎಲ್ಲರೂ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದ್ದರಿಂದ ಮಾರ್ಕೆಲ್ ಅವರದ್ದು ಏಕಾಂಗಿ ಹೋರಾಟವಾಯಿತು. ಅದರಲ್ಲೂ ಇನಿಂಗ್ಸ್ ನ ಕೊನೆಯ ಓವರ್‍ನಲ್ಲಿ ಪಂದ್ಯ ಗೆಲ್ಲಲು 19 ರನ್ ಬೇಕಿದ್ದಾಗ, ಮೊದಲ ಎಸೆತವನ್ನು ಬೌಂಡರಿಗೆ ಕಳುಹಿಸಿದ ಮಾರ್ಕೆಲ್, ನಾಲ್ಕನೇ ಎಸೆತವನ್ನು ಸಿಕ್ಸರ್ ಎತ್ತಿದರು. ಇನ್ನು ಕೊನೆಯ ಎಸೆತದಲ್ಲಿ ಒಂದು ಸಿಕ್ಸರ್ ಅವಶ್ಯಕವಿದ್ದಾಗ ಶಕ್ತಿ ಮೀರಿ ಬ್ಯಾಟ್ ಬೀಸಿದ ಅವರು ಕೇವಲ ಬೌಂಡರಿ ಗಳಿಸುವಲ್ಲಿ ಮಾತ್ರ ಶಕ್ತರಾದರು.
ಅಂತಿಮವಾಗಿ, ಡೆಲ್ಲಿ ತಂಡ ಕೇವಲ 1 ರನ್‍ನ ಸೋಲು ಅನುಭವಿಸಿತು. ಡೆಲ್ಲಿ ತಂಡದ ಸೋಲಿಗೆ ಬ್ಯಾಟ್ಸ್ ಮನ್ ಗಳ ವೈಫಲ್ಯವೇ ಕಾರಣ ಎಂದೇ ಹೇಳಬಹುದು. ಮಾರ್ಕೆಲ್ ಬಿಟ್ಟರೆ, ಮಧ್ಯಮ ಕ್ರಮಾಂಕದ ಕೇದಾರ್ ಜಾಧವ್ ವೈಯಕ್ತಿಕವಾಗಿ ಗಳಿಸಿದ 20 ರನ್‍ಗಳೇ ಆ ತಂಡದ ಬ್ಯಾಟಿಂಗ್ ಲೈನ್ ಅಪ್‍ನ 2ನೇ ವೈಯಕ್ತಿಕ ಗರಿಷ್ಠ ಮೊತ್ತವಾಗಿದ್ದು ಬ್ಯಾಟ್ಸ್ ಮನ್ ಗಳ ವೈಫಲ್ಯವನ್ನು ಎತ್ತಿ ತೋರುತ್ತಿತ್ತು.