ಕೋಲ್ಕತಾ: ವಿಶ್ವಕಪ್ ಸೋಲಿಗೆ ತನ್ನ ಗರ್ಲ್‌ಫ್ರೆಂಡ್ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಾರಣ ಎಂದು ಟೀಕಿಸಿದವರಿಗೆ ತಿರುಗೇಟು ನೀಡಿರುವ ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೋಹ್ಲಿ, 'ಈ ರೀತಿ ಟೀಕಿಸುವುದಕ್ಕೆ ಅವರಿಗೆ ನಾಚಿಕೆಯಾಗಬೇಕು. ಕಳೆದು ಐದು ವರ್ಷಗಳಲ್ಲಿ ನನ್ನಷ್ಟು ಪಂದ್ಯಗಳನ್ನು ಯಾರೂ ಗೆದ್ದಿಲ್ಲ' ಎಂದಿದ್ದಾರೆ.
ಭಾರತ ವಿಶ್ವಕಪ್‌ನಲ್ಲಿ ಸೋಲು ಅನುಭವಿಸಿದ ನಂತರ ಇದೇ ಮೊದಲ ಬಾರಿಗೆ ಆ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ, 'ಒಬ್ಬ ಮನುಷ್ಯನಾಗಿ ನನಗೂ ನೋವಾಗಿದೆ ಅಂತ ನಾನು ಹೇಳುತ್ತೇನೆ ಮತ್ತು ಅವರು ಟೀಕಿಸಿದ ರೀತಿಯಿಂದ ಅವರಿಗೇ ನಾಚಿಕೆಯಾಗಬೇಕು ಎಂದಿದ್ದಾರೆ.
ಐಪಿಎಲ್ ಪ್ರಚಾರಾರ್ಥ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ವಿಶ್ವಕಪ್ ಸೋಲಿಗೆ ಅನುಷ್ಕಾ ಶರ್ಮಾ ಕಾರಣ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿ ಕೊಹ್ಲಿ, ಇದರಿಂದ ವೈಯಕ್ತಿಕವಾಗಿ ನನಗೆ ತುಂಬಾ ಬೇಸರವಾಗಿದೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಪಂದ್ಯಗಳ ಗೆಲುವಿಗೆ ನಾನು ಶ್ರಮಿಸಿದ್ದೇನೆ ಮತ್ತು ತಂಡದಲ್ಲಿ ಇತರರಿಗಿಂತಲೂ ನಾನು ಉತ್ತಮ ಆಟ ಪ್ರದರ್ಶಿಸಿದ್ದೇನೆ ಎಂದರು.
ಆಸ್ಟ್ರೇಲಿಯ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ, ನಟಿ ಅನುಷ್ಕಾ ಶರ್ಮಾ ಅವರೇ ಕಾರಣ ಎಂಬ ಟೀಕೆ ಕೇಳಿಬಂದಿತ್ತು. ಆದರೆ ಇಂತಹ ಆರೋಪಗಳಿಗೆ ವಿರಾಟ್ ಕೊಹ್ಲಿ ಮಾತ್ರ ಇಲ್ಲಿಯವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ.