ಜೈಪುರ: ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ತವರು ಅಂಗಣ ಸವಾಯಿ ಮಾನ್‍ಸಿಂಗ್ ಕ್ರೀಡಾಂಗಣದಲ್ಲಿ ಈ ಬಾರಿ ಒಂದೂ ಪಂದ್ಯವನ್ನು ಆಡುತ್ತಿಲ್ಲ. ಬೇರೆ ನಗರಗಳಲ್ಲಿ ಪಂದ್ಯಗಳನ್ನು ಆಡುತ್ತಿದ್ದರೂ ಯಾವುದೇ ಪಿಚ್‍ಗೂ ಒಗ್ಗಿಕೊಂಡು ಉತ್ತಮ ಪ್ರದರ್ಶನ ನೀಡಲು ತಂಡ ಸಂಪೂರ್ಣ ಸಜ್ಜಾಗಿದೆ ಎಂದು ತಂಡದ ಮಾರ್ಗದರ್ಶಕ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಕಳೆದ ಬಾರಿ ಅಹ್ಮದಾಬಾದ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ತವರಿನ ಪಂದ್ಯಗಳನ್ನಾಡಿತ್ತು. ಆದರೆ ಈ ಬಾರಿ ರಾಜಸ್ಥಾನ ತಂಡ ಅಹ್ಮದಾಬಾದ್ ಹಾಗೂ ಮುಂಬೈನಲ್ಲಿ ತನ್ನ ತವರು ಪಂದ್ಯವನ್ನಾಡಲಿದೆ. ರಾಜಸ್ಥಾನ ರಾಯಲ್ಸ್ ತಂಡ ತನ್ನ ತವರಿನ ಪಂದ್ಯಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ದ್ರಾವಿಡ್ ಒಪ್ಪಿಕೊಂಡಿದ್ದಾರೆ.
ಜೈಪುರದ ತವರಿನ ಪಂದ್ಯದ ಕೊರತೆ ಅನುಭವಿಸುತ್ತೇವೆ. ಜೈಪುರದಲ್ಲಿ ನಮ್ಮ ತಂಡ ಅತ್ಯುತ್ತಮ ಪ್ರದರ್ಶನ ನೀಡಿರುವ ದಾಖಲೆ ಇದೆ. ಅಲ್ಲಿನ ಪಿಚ್‍ಗೆ ಉತ್ತಮವಾಗಿ ಹೊಂದಿಕೊಂಡಿದ್ದೆವು. ಕಳೆದ ವರ್ಷ ಅಹ್ಮದಾಬಾದ್‍ನಲ್ಲಿ ನಾವು ಆಡಿದ್ದು ನೆರವಾಗಿತ್ತು. ಮುಂಬೈನಲ್ಲಿರುವ ಬ್ರೆಬೊರ್ನ್ ಕ್ರೀಡಾಂಗಣ ಸಹ ಕ್ರಿಕೆಟ್ ಆಡಲು ಅತ್ಯುತ್ತಮ ಪಿಚ್ ಎಂದು ದ್ರಾವಿಡ್ ಹೇಳಿದ್ದಾರೆ.