ಇಪೋ(ಮಲೇಷ್ಯಾ): ಸುಲ್ತಾನ್ ಅಜ್ಲಾನ್ ಶಾ ಹಾಕಿ ಪಂದ್ಯಾವಳಿಯಿಂದ ಈಗಾಗಲೇ ಹೊರಬಿದ್ದಿರುವ ಭಾರತ, ಶನಿವಾರ ನಡೆಯುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಕಳೆದ ಡಿಸೆಂಬರ್‍ನಲ್ಲಿ ಇತ್ತಂಡಗಳು ಭುವನೇಶ್ವರದಲ್ಲಿ ನಡೆದಿದ್ದ ಎಫ್ಐಎಚ್ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆಗಲೂ ಆಸ್ಟ್ರೇಲಿಯಾ ತಂಡ 2-1 ಗೋಲುಗಳ ಅಂತರದಲ್ಲಿ ಗೆಲವು ಪಡೆದಿತ್ತು. ಹಾಗಾಗಿ, ಶನಿವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಒಂದು ಸದಾವಕಾಶವಿದೆ.
ಆದರೆ, ಆಸ್ಟ್ರೇಲಿಯಾ ತಂಡವನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ. ಟೂರ್ನಿಯಲ್ಲಿ ಈವರೆಗೆ ಭಾರತ ತಂಡ ದುರ್ಬಲ ಪ್ರದರ್ಶನ ನೀಡಿದೆ. ನೂತನ ಮುಖ್ಯ
ಕೋಚ್ ಪಾಲ್ ವ್ಯಾನ್ ಆ್ಯಸ್ ಮಾರ್ಗದರ್ಶನದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನಾಡುತ್ತಿರುವ ಭಾರತ ತಂಡಕ್ಕೆ ಕೇವಲ ಅಜ್ಲಾನ್ ಶಾ ಕಪ್ ಗೆಲ್ಲುವುದೇ ಮುಖ್ಯವಾಗಿರಲಿಲ್ಲ. 2016ರ ಒಲಿಂಪಿಕ್ಸ್‍ಗೆ ಕಾಲಿಡಲು ಈ ಪಂದ್ಯಾವಳಿಯನ್ನು ಮೆಟ್ಟಿಲನ್ನಾಗಿ ಉಪಯೋಗಿಸಿಕೊಳ್ಳಬೇಕಿತ್ತು.
ಆದರೆ, ಅದರಲ್ಲಿ ಭಾರತ ತಂಡ ಎಡವಿದೆ. ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ ಡ್ರಾ ಸಾಧಿಸಿದ್ದ ಸರ್ದಾರ್ ಪಡೆ, ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಹಾಗೂ ಮಲೇಷ್ಯಾ ವಿರುದ್ಧ ಸೋಲು ಕಂಡಿತ್ತು. ಗುರುವಾರ ನಡೆದ ಪಂದ್ಯದಲ್ಲಿ ಕೆನಡಾ ವಿರುದ್ಧ ಜಯ ಸಾ„ಸಿತು. ಭಾರತ, ಆಸೀಸ್ ವಿರುದ್ಧ ಜಯಗಳಿಸಿದರೆ, ಕನಿಷ್ಠ ಎರಡರಲ್ಲಾದರೂ ಗೆದ್ದೆವು ಎಂದು ಸಮಾಧಾನದಿಂದ ಸ್ವದೇಶದತ್ತ ಮರಳಬೇಕಷ್ಟೆ.