ಕೋಲ್ಕತಾ: ಕ್ರಿಸ್ ಗೇಯ್ಲ್ ಅವರ ಭರ್ಜರಿ 96 ರನ್‍ಗಳ ಸಹಾಯದಿಂದ ರಾಯಲ್ ಚಾಲೆಂಜರ್ಸ್ (ಆರ್‍ಸಿಬಿ) ತಂಡ, ಶನಿವಾರ ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಅದರ ತವರಿನಲ್ಲೇ 3 ವಿಕೆಟ್‍ಗಳಿಂದ ಮಣಿಸಿತು.
ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತಾ ತಂಡ, 20 ಓವರ್‍ಗಳಲ್ಲಿ 6 ವಿಕೆಟ್‍ಗೆ 177 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ತಂಡ, 19 ಓವರ್‍ಗಳಲ್ಲಿ 7 ವಿಕೆಟ್‍ಗೆ 179 ರನ್ ಗಳಿಸುವ ಮೂಲಕ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಜಯದ ಶುಭಾರಂಭ ಮಾಡಿತು.
ಮನಗೆದ್ದ ಗೇಯ್ಲ್ ಆಟ
ರಾಯಲ್ ಚಾಲೆಂಜರ್ಸ್ ತಂಡದ ಗೆಲವಿನ ರೂವಾರಿಯಾಗಿ ಕ್ರಿಸ್ ಗೇಯ್ಲ್ ಹೊರಹೊಮ್ಮಿದರು. ಆರ್‍ಸಿಬಿ ಅಬಿsಮಾನಿಗಳು ತಮ್ಮ ಮೇಲಿಟ್ಟಿದ್ದ ಅಪಾರ ನಿರೀಕ್ಷೆಯನ್ನು ಅವರು ಹುಸಿಗೊಳಿಸಲಿಲ್ಲ. ಮೊದಲ ವಿಕೆಟ್‍ಗೆ ನಾಯಕ ವಿರಾಟ್ ಕೊಹ್ಲಿ ಜೊತೆ ಸೇರಿ 29 ರನ್ ಪೇರಿಸುವಷ್ಟರಲ್ಲಿ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ವಿರಾಟ್ ಕೊಹ್ಲಿ ಬೇಗನೇ ಔಟಾದರು. ಅವರ ನಂತರ, ದಿನೇಶ್ ಕಾರ್ತಿಕ್, ಮಂದೀಪ್ ಸಿಂಗ್ ಅವರೂ ಬೇಗನೇ ವಿಕೆಟ್ ಒಪ್ಪಿಸಿದರು.
ಇನ್ನು, ತಂಡದ ಮತ್ತೊಬ್ಬ ಭರವಸೆಯ ಆಟಗಾರ ಎಬಿ ಡಿವಿಲಿಯರ್ಸ್, 4ನೇ ವಿಕೆಟ್‍ಗೆ ಕ್ರಿಸ್ ಅವರ ಜೊತೆಗೂಡಿದರು. ಸಿಡಿಲಬ್ಬರ ಆರ್ಭಟಕ್ಕೆ ಮುಂದಾದ ಡಿವಿಲಿಯರ್ಸ್ 13 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಚಚ್ಚಿ 28 ಗಳಿಸಿದರು. ಆದರೆ, ಇನಿಂಗ್ಸ್‍ನ 11 ನೇ ಓವರ್ ನಲ್ಲಿ ಕನ್ನಡಿಗ ಕಾರಿಯಪ್ಪ ಅವರ ಎಸೆತದಲ್ಲಿ ಮುಂದೆ ಬಂದು ಆಡಲು ಯತ್ನಿಸಿದ ಅವರು, ಉತ್ತಪ್ಪ ಮಾಡಿದ ಸ್ಟಂಪ್‍ಗೆ ಬಲಿಯಾಗಿ ಹೊರನಡೆದರು. ಡಿವಿಲಿಯರ್ಸ್ ಹೊರಹೋದ ಮೇಲೆ ಡಾರೆನ್ ಸಾಮಿ, ಸೀನ್ ಅಬಾಟ್ ವಿಕೆಟ್ ಉರುಳಿದವು. ಆದರೆ, ಕ್ರೀಸ್ ನಲ್ಲಿದ್ದ ಗೇಯ್ಲ್ ಮೇಲೆ ಎಲ್ಲರ ನಿರೀಕ್ಷೆ ಮಡುಗಟ್ಟಿತ್ತು.
ಅವರೂ ಸಹ ಈ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ತಮ್ಮ ಎಂದಿನ ಸಿಕ್ಸರ್, ಬೌಂಡರಿಗಳ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸುತ್ತಾ ತಂಡವನ್ನು ಗೆಲವಿನ ಹಾದಿಗೆ ತಂದರು. ಆದರೆ, ಇನ್ನೇನು ಗೆಲವಿನ ಗೆರೆಗೆ ಅನತಿ ದೂರದಲ್ಲಿದ್ದಾಗ ಅನಗತ್ಯ ರನ್ ಕದಿಯಲು ಹೋದ ಗೇಯ್ಲ್ ಔಟಾಗಿ ಹೊರನಡೆದರು. ಆದರೆ, ಅವರು ಹಾಕಿದ್ದ ಭದ್ರ ಅಡಿಪಾಯದ ಮೇಲೆ ಇನಿಂಗ್ಸ್ ನ ಅಂತಿಮ ಹಂತದಲ್ಲಿ ಜೊತೆಯಾದ ಹರ್ಷಲ್ ಪಟೇಲ್ ಹಾಗೂ ಅಬು ಅಹ್ಮದ್ ತಂಡಕ್ಕೆ ಗೆಲವು ತಂದಿತ್ತರು.
ಹೊಸ ಸಾಧನೆ
ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕ್ರಿಸ್ ಗೇಯ್ಲ್ ಟಿ20 ವೃತ್ತಿಜೀವನದಲ್ಲಿ 7000 ರನ್ ಗಡಿ ದಾಟಿದರು. ಈ ಪಂದ್ಯದಲ್ಲಿ ಗಳಿಸಿದ 96 ರನ್ ಮೊತ್ತ ಸೇರಿ 7071 ರನ್ ಗಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.
ವಿಲನ್ ಆದ ಮಾರ್ಕೆಲ್
ಆರ್‍ಸಿಬಿ ಗೆಲವಿಗೆ ಕ್ರಿಸ್ ಗೇಯ್ಲ್ ಎಷ್ಟು ಪ್ರಮುಖರಾದರೋ, ಕೋಲ್ಕತಾ ತಂಡದ ಮಾರ್ನೆ ಮಾರ್ಕೆಲ್ ಸಹ ಅಷ್ಟೇ ಕಾರಣರಾದರು. ಏಕೆಂದರೆ, ಆರ್ ಸಿಬಿ ಇನಿಂಗ್ಸ್‍ನ 12ನೇ ಓವರ್‍ನ ಮೊದಲ ಎಸೆತದಲ್ಲೇ ಕ್ರಿಸ್ ಗೇಯ್ಲ್ ಮಾರ್ಕೆಲ್‍ಗೆ ಕ್ಯಾಚ್ ನೀಡಿದ್ದರು. ಯೂಸುಫ್ ಪಠಾಣ್ ಮಾಡಿದ್ದ ಆ ಓವರ್‍ನ ಮೊದಲ ಎಸೆತದಲ್ಲೇ ಪುಲ್ ಮಾಡಲು ಮುಂದಾಗಿದ್ದ ಗೇಯ್ಲ್ ಅವರ ಬ್ಯಾಟ್‍ಗೆ ತಗುಲಿದ ಚೆಂಡು ಡೀಪ್ ಮಿಡ್‍ವಿಕೆಟ್ ನಲ್ಲಿ ನಿಂತಿದ್ದ ಮಾರ್ಕೆಲ್ ಬಳಿ ಸಾಗಿತ್ತು. ಆದರೆ, ಅದನ್ನು ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಮಾರ್ಕೆಲ್ ವಿಫಲರಾದರು.
ಇದೇ ಮಾರ್ಕೆಲ್, ಗೇಯ್ಲ್ ನೀಡಿದ್ದ ಮತ್ತೊಂದು ಕ್ಯಾಚ್ ಕೈಚೆಲ್ಲಿದರು! ಇನಿಂಗ್ಸ್‍ನ 16ನೇ ಓವರ್‍ನ ಕೊನೆಯ ಎಸೆತದಲ್ಲೂ ಗೇಯ್ಲ್ ಅವರು ಮಾರ್ಕೆಲ್‍ಗೆ ಕ್ಯಾಚ್ ನೀಡಿದ್ದರು. ಈ ಓವರ್ ಸಹ ಯೂಸುಫ್ ಪಠಾಣ್ ಬೌಲ್ ಮಾಡಿದ್ದರು. ಇದೇ ಓವರ್‍ನ ಕೊನೆಯ ಎಸೆತದಲ್ಲಿ, ಸ್ಕೇರ್ ಲೆಗ್ ಕಡೆಗೆ ತಳ್ಳಲು ಗೇಯ್ಲ್ ಯತ್ನಿಸಿದಾಗ ಅದು ಅವರ ಬ್ಯಾಟ್‍ಗೆ ತಾಗಿ ಪುಟಿದೆದ್ದು ನೇರವಾಗಿ ಮಾರ್ಕೆಲ್ ಬಳಿಗೆ ಸಾಗಿತ್ತು. ಆದರೆ, ಈ ಬಾರಿಯೂ ಮಾರ್ಕೆಲ್ ಕ್ಯಾಚ್ ಕೈಚೆಲ್ಲಿದರು. ತಮಗೆ ಸಿಕ್ಕ ಎರಡು ಜೀವದಾನಗಳನ್ನು ಸದುಪಯೋಗಪಡಿಸಿಕೊಂಡ ಗೇಯ್ಲ್ , 96 ರನ್ ಗಳಿಸಿ, ಆರ್‍ಸಿಬಿ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೋಲ್ಕತಾ ಸ್ಪರ್ಧಾತ್ಮಕ ಮೊತ್ತ
ಆರ್‍ಸಿಬಿ ಪಂದ್ಯಕ್ಕೂ ಮುನ್ನ, ಟಾಸ್ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ, ಕೋಲ್ಕತಾ ತಂಡವನ್ನು ಮೊದಲು ಬ್ಯಾಟಿಂಗ್ ಇಳಿಸಿದರು. ಹೀಗೆ ಸಿಕ್ಕ ಸದಾವಕಾಶವನ್ನು ಉತ್ತಮವಾಗಿ ಬಳಸಿಕೊಂಡ ಕೋಲ್ಕತಾ ತಂಡದ ಆರಂಬಿsಕರಾದ ರಾಬಿನ್ ಉತ್ತಪ್ಪ ಹಾಗೂ ಗೌತಮ್ ಗಂಭೀರ್ ಮೊದಲ ವಿಕೆಟ್‍ಗೆ 81 ರನ್ ಗಳ ಜೊತೆಯಾಟ ನೀಡಿ, ಇನಿಂಗ್ಸ್‍ಗೆ ಭದ್ರ ಬುನಾದಿ ಹಾಕಿದರು. ಆನಂತರ, ಆ್ಯಂಡಿ ರಸೆಲ್ ಅವರು 17 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸೇರಿದಂತೆ ಅಜೇಯ 41 ರನ್ ಬಾರಿಸಿ ಕೋಲ್ಕತಾ ತಂಡ 177 ರನ್‍ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಹಕರಿಸಿದರು.
ಕೋಲ್ಕತಾ ನೈಟ್‍ರೈಡರ್ಸ್
20 ಓವರ್‍ಗಳಲ್ಲಿ 6 ವಿಕೆಟ್‍ಗೆ 177
ರಾಬಿನ್ ಉತ್ತಪ್ಪ ಸಿ ಸಾಮಿ ಬಿ ಅಹ್ಮದ್ 35 (28 ಎಸೆತ,4 ಬೌಂಡರಿ), ಗಂಭೀರ್ ಸಿ ಮಂದೀಪ್ ಸಿಂಗ್ ಬಿ ಚಾಹಲ್ 58 (46 ಎಸೆತ, 7 ಬೌಂಡರಿ, 1 ಸಿಕ್ಸರ್), ಮನೀಷ್ ಪಾಂಡೆ ರನೌಟ್ 23 (15 ಎಸೆತ, 4 ಬೌಂಡರಿ), ಸೂರ್ಯಕುಮಾರ್ ಯಾದವ್ ಸಿ ಮಂದೀಪ್ ಬಿ ಹರ್ಷಲ್ 11 (9 ಎಸೆತ, 2 ಬೌಂಡರಿ), ಯೂಸುಫ್ ಪಠಾಣ್ ಸಿ ಕೊಹ್ಲಿ ಬಿ ವರುಣ್ ಅರುಣ್ 3 (4 ಎಸೆತ), ರಸೆಲ್ ಅಜೇಯ 41 (17 ಎಸೆತ, 6 ಬೌಂಡರಿ, 2 ಸಿಕ್ಸರ್), ಶಕೀಬ್ ಅಲ್ ಹಸನ್ ರನೌಟ್ 0 (1 ಎಸೆತ), ಪಿಯೂಶ್ ಚಾವ್ಲಾ ಅಜೇಯ 0. ಇತರೆ (ಬೈ 1, ಲೆಗ್‍ಬೈ 2, ವೈಡ್ 3) 6.
ವಿಕೆಟ್ ಪತನ: 1--81, 2--103, 3--131, 4--131, 5--163, 6--173. ಬೌಲಿಂಗ್ ವಿವರ: ಸೀನ್ ಅಬ್ಬಾಟ್ 3-0-36-0, ಹರ್ಷಲ್ ಪಟೇಲ್ 4-0-37-1, ವರುಣ್ ಅರುಣ್ 4-0-38-1, ಅಬು ಅಹ್ಮದ್ 4-0-28-1, ಡಾರೆನ್ ಸಾಮಿ 1-0-7-0, ಚಾಹಲ್ 4-0-28-1.
ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್‍ಗಳಲ್ಲಿ 7 ವಿಕೆಟ್‍ಗೆ 179 ಕ್ರಿಸ್ ಗೇಯ್ಲ್ ರನೌಟ್ 96 (56 ಎಸೆತ, 7 ಬೌಂಡರಿ, 7 ಸಿಕ್ಸರ್), ವಿರಾಟ್ ಕೊಹ್ಲಿ ಸಿ ಉತ್ತಪ್ಪ ಬಿ ಮಾರ್ಕೆಲ್ 13 (15 ಎಸೆತ, 1 ಸಿಕ್ಸರ್), ದಿನೇಶ್ ಕಾರ್ತಿಕ್ ಬಿ ಪಠಾಣ್ 6 (8 ಎಸೆತ, 1 ಬೌಂಡರಿ), ಮಂದೀಪ್ ಸಿಂಗ್ ಬಿ ಪಠಾಣ್ 6 (3 ಎಸೆತ, 1 ಸಿಕ್ಸರ್), ಎಬಿ ಡಿವಿಲಿಯರ್ಸ್ ಸ್ಟಂಪ್ ಉತ್ತಪ್ಪ ಬಿ ಕಾರಿಯಪ್ಪ 28 (13 ಎಸೆತ, 3 ಬೌಂಡರಿ, 2 ಸಿಕ್ಸರ್), ಡಾರೆನ್ ಸಾಮಿ ಸ್ಟಂಪ್ ಉತ್ತಪ್ಪ ಬಿ ಶಕೀಬ್ ಅಲ್ ಹಸನ್ 7 (9 ಎಸೆತ), ಸೀನ್ ಅಬ್ಬಾಟ್ ರನೌಟ್ 1 (4 ಎಸೆತ), ಹರ್ಷಲ್ ಪಟೇಲ್ ಅಜೇಯ 9 (4 ಎಸೆತ, 1 ಸಿಕ್ಸರ್), ಅಬು ನೆಚಿಮ್ ಅಹ್ಮದ್ ಅಜೇಯ 5 (2 ಎಸೆತ, 1 ಬೌಂಡರಿ). ಇತರೆ (ಲೆಗ್‍ಬೈ 7, ವೈಡ್ 1) 8.
ವಿಕೆಟ್ ಪತನ: 1--29, 2--50, 3--56, 4--93, 5--119, 6--133, 7--171.
ಬೌಲಿಂಗ್ ವಿವರ
4-0-35-1, ಸುನಿಲ್ ನಾರಾಯಣ್, 4-0-26-0, ಕೆ.ಸಿ. ಕಾರಿಯಪ್ಪ 2-0-28-1, ಆ್ಯಂಡ್ರಿ ರಸೆಲ್ 2-0-16-0, ಯೂಸುಫ್ ಪಠಾಣ್, 4-0-40-2, ಪಿಯೂಶ್ ಚಾವ್ಲಾ 1-0-10-0, ಶಕೀಬ್ ಅಲ್ ಹಸನ್ 2-0-17-1.