ಇಫೋ(ಮಲೇಷ್ಯಾ): ಎದುರಾಳಿ ತಂಡಕ್ಕೆ ತಡೆಗೋಡೆಯಾಗಿ ನಿಂತ ಗೋಲ್ ಕೀಪರ್ ಶ್ರೀಜೇಶ್ ಹಾಗೂ ಶೂಟೌಟ್‍ನಲ್ಲಿ ಆಟಗಾರರ ಮೊನಚಾದ ಪ್ರದರ್ಶನದ ನೆರವಿನಿಂದ ಭಾರತ ಹಾಕಿ ತಂಡ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದುಕೊಂಡಿದೆ.
ಭಾನುವಾರ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ ಎದುರಾಳಿ ದಕ್ಷಿಣ ಕೊರಿಯಾ ವಿರುದ್ಧ 6-3 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಪರಿಣಾಮ ಪಂದ್ಯದ ಫಲಿತಾಂಶವನ್ನು ಶೂಟೌಟ್‍ಗಳ ಮೂಲಕ ನಿರ್ಧರಿಸಲಾಯಿತು.
ಈ ವೇಳೆ ಭಾರತದ ಆಟಗಾರರು ಆರಂಭಿಕ ನಾಲ್ಕು ಅವಕಾಶಗಳಲ್ಲಿ ಗೋಲು ದಾಖಲಿಸಿದರು. ಆದರೆ ದಕ್ಷಿಣ ಕೊರಿಯಾ ಮೊದಲ ಅವಕಾಶದಲ್ಲಿ ಮಾತ್ರ ಗೋಲು ದಾಖಲಿಸಿತು. ನಂತರದ ಎರಡು ಅವಕಾಶದಲ್ಲಿ ವಿಫಲವಾದ ಕಾರಣ ಭಾರತಕ್ಕೆ ಶೂಟೌಟ್‍ನಲ್ಲಿ 4-1 ಅಂತರದ ಮುನ್ನಡೆ ದೊರೆತು ಜಯ ಒಲಿಯಿತು. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ತಂಡ ಬೇಗನೆ ಗೋಲಿನ ಖಾತೆ ತೆರೆಯಿತು. ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಹೀರೊ ಕರ್ನಾಟಕದ ನಿಕ್ಕಿನ್ ತಿಮ್ಮಯ್ಯ 10ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 19ನೇ ನಿಮಿಷದಲ್ಲಿ ಕೊರಿಯಾ ತಂಡ ಗೋಲು ದಾಖಲಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿತು. ಈ ವೇಳೆ ಹ್ಯೊಸಿಕ್ ಗೋಲು ದಾಖಲಿಸುವ ಪ್ರಯತ್ನ ನಡೆಸಿದರು.
ಆರಂಭದಲ್ಲಿ ಗೋಲ್‍ಕೀಪರ್ ಶ್ರೀಜೇಶ್ ಅದನ್ನು ತಡೆದರಾದರೂ ವಾಪಸ್ ಬಂದ ಚೆಂಡನ್ನು ಹ್ಯೊಸಿಕ್ ಮತ್ತೆ ಗೋಲು ಪೆಟ್ಟಿಗೆಗೆ ಕಳುಹಿಸುವಲ್ಲಿ ಯಶಸ್ವಿಯಾದರು. ನಂತರ 22ನೇ ನಿಮಿಷದಲ್ಲೇ ಭಾರತದ ಧರಮ್ ವೀರ್ ಸಿಂಗ್ ಗೋಲು ದಾಖಲಿಸುವ ಮೂಲಕ ಭಾರತ ಮತ್ತೆ ಮುನ್ನಡೆ ಪಡೆದುಕೊಂಡಿತು. 28ನೇ ನಿಮಿಷದಲ್ಲಿ ಹ್ಯೂನ್ ವೊ ಅವರು ಗೋಲು ಗಳಿಸುವುದರೊಂದಿಗೆ ಕೊರಿಯಾ ಪಂದ್ಯದಲ್ಲಿ ಮತ್ತೆ ಮೈಕೊಡವಿ ಮೇಲೆದ್ದಿತು. ಪಂದ್ಯದ ನಂತರದ ಸಮಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಶೂಟೌಟ್ ಹಂತದಲ್ಲಿ ಭಾರತದ ಪರ ಆಕಾಶ್ ದೀಪ್, ನಾಯಕ ಸರ್ದಾರ್ ಸಿಂಗ್, ರೂಪಿಂದರ್ ಸಿಂಗ್ ಹಾಗೂ ಬಿರೇಂದರ್ ಲಕ್ರಾ ಗೋಲು ದಾಖಲಿಸಿದರು. ದಕ್ಷಿಣ ಕೊರಿಯಾದ ಸಾಕಷ್ಟು ಪ್ರಯತ್ನವನ್ನು ವಿಫಲಗೊಳಿಸಿದ ಶ್ರೀಜೇಶ್ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.