ಹೇಸ್ಟಿಂಗ್ಸ್ (ನ್ಯೂಜಿಲೆಂಡ್): ಹಾಕ್ಸ್ ಬೇ ಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ವನಿತೆಯರ ಸವಾಲು ಅಂತ್ಯಗೊಂಡಿದೆ.
ಗುರುವಾರ ನಡೆದ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ 1-4 ಗೋಲುಗಳ ಅಂತರದಲ್ಲಿ ಮಣಿದು ಪ್ರಶಸ್ತಿಯ ಹಾದಿಯಿಂದ ವಿಮುಖವಾಗಿದೆ. ಪಂದ್ಯದ 6ನೇ ನಿಮಿಷದಲ್ಲಿ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಭಾರತ ತಂಡದ ನಾಯಕಿ ರಿತು ರಾಣಿ ಗೋಲು ಗಳಿಸಿ ಪ್ರಭುತ್ವ ಸಾಧಿಸಿದರು. ಆದರೆ, ಈ ಪ್ರಭುತ್ವ ಕೆಲವೇ ನಿಮಿಷಗಳದ್ದಾಗಿತ್ತು. ಮುಂದಿನ ನಿಮಿಷದಲ್ಲೇ ತನ್ನ ಮೊದಲ ಗೋಲು ದಾಖಲಿಸಿದ ನ್ಯೂಜಿಲೆಂಡ್, ಭಾರತದೊಂದಿದೆ ಸಮಬಲ ಸಾಧಿಸಿತು.
ಈ ಗೋಲು ಗಳಿಸಿಕೊಟ್ಟಿದ್ದು ಪೇತ್ರಾ ವೆಬರ್. ಇದಾದ ಮೇಲೆ, ಆತಿಥೇಯರಿಗೆ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತ್ತಾದರೂ, ಭಾರತದ ರಕ್ಷಣಾ ವಿಭಾಗದ ಆಟಗಾರ್ತಿಯರ ಪ್ರಯತ್ನದಿಂದ ಈ ಗೋಲು ನ್ಯೂಜಿಲೆಂಡ್ಗೆ ಲಭ್ಯವಾಗಲಿಲ್ಲ. ಆದರೆ, ಈ ವೈಫಲ್ಯವನ್ನು ಮೆಟ್ಟಿದ ಕಿವೀಸ್ ಆಟಗಾರ್ತಿಯರು 28ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತದ ವಿರುದ್ಧ 2-1ರ ಮುನ್ನಡೆ ಪಡೆದುಕೊಂಡರು.
ಪಂದ್ಯದ ಮೂರನೇ ಕ್ವಾರ್ಟರ್ನಲ್ಲಿ ಭಾರತ ಗೋಲು ಗಳಿಸಲು ಮಾಡಿ ಪ್ರಯತ್ನಗಳು ಕೂದಲೆಳೆಯಲ್ಲಿ ವಿಫಲವಾದವು. ಆದರೆ, ಇದೇ ಹಂತದಲ್ಲಿ ನ್ಯೂಜಿಲೆಂಡ್ ಮತ್ತೊಂದು ಗೋಲು ಗಳಿಸಿ 3-1ರ ಮುನ್ನಡೆ ಪಡೆದುಕೊಂಡಿತು. ಇನ್ನು, ಪಂದ್ಯದ 55ನೇ ನಿಮಿಷದಲ್ಲಿ ಎಲ್ಲಾ ಗುನ್ಸನ್ ಗಳಿಸಿದ ಫೀಲ್ಡ್ ಗೋಲು ಆ ತಂಡಕ್ಕೆ 4-1ರ ಮುನ್ನಡೆಯೊಂದಿಗೆ ಜಯವನ್ನೂ ತಂದುಕೊಟ್ಟಿತು. ಅಮೆರಿಕ ಹಾಗೂ ಕೊರಿಯಾ ತಂಡಗಳ ನಡುವೆ ನಡೆಯಲಿರುವ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲುವ ತಂಡದೊಂದಿಗೆ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.