ಮೊನಾಕೊ: ಭಾರತ ಹಾಗೂ ಕೆನಡಾ ಜೋಡಿಯಾದ ಲಿಯಾಂಡರ್ ಪೇಸ್ ಹಾಗೂ ಡೇನಿಯಲ್ ನೆಸ್ಟರ್, ಮಾಂಟೆ ಕಾರ್ಲೊ ಮಾಸ್ಟರ್ಸ್ ಟೂರ್ನಿಯಿಂದ ಆಚೆ ಸರಿದಿದೆ.
ಮಂಗಳವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಪೇಸ್-ನೆಸ್ಟರ್, ವೈಲ್ಡ್ ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶ ಪಡೆದಿದ್ದ ಫ್ರಾನ್ಸ್- ಸ್ವಿರ್ಡರ್ಲೆಂಡ್ ಜೋಡಿಯಾದ ಬೆನೊಯ್ಟ್ ಪೈರೆ ಹಾಗೂ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ದ 4-6, 6-7 (4) ಅಂತರದಲ್ಲಿ ಸೋತರು.
ಮಾಂಟೆ ಕಾರ್ಲೊ ಕಂಟ್ರಿ ಕ್ಲಬ್‍ನ ಅಂಗಣದಲ್ಲಿ ಸುಮಾರು ಒಂದು ಗಂಟೆ, ಏಳು ನಿಮಿಷಗಳ ಕಾಲ ನಡೆದಿದ್ದ ಪಂದ್ಯದ ಮೊದಲ ಸೆಟ್‍ನಲ್ಲಿ ನಾಲ್ಕು ಬ್ರೇಕ್ ಪಾಯಿಂಟ್ಗಳನ್ನು ಉಳಿಸಿಕೊಂಡ ಬೆನೊಯ್ಟ್-ವಾವ್ರಿಂಕಾ ಜೋಡಿ, ಅನಾಯಾಸವಾಗಿ ಈ ಸೆಟ್‍ನಲ್ಲಿ ಜಯ ಸಾಧಿಸಿತು. ಆದರೆ, ಎರಡನೇ ಸೆಟ್‍ನಲ್ಲಿ ಭಾರತ-ಕೆನಡಾ ಜೋಡಿ ತಿರುಗಿಬಿತ್ತು.
ತೀವ್ರ ಹಣಾಹಣಿಯಿದ್ದ ಈ ಸೆಟ್‍ನಲ್ಲಿ ತಮಗೆ ಲಭ್ಯವಾಗಬೇಕಿದ್ದ ಎರಡು ಬ್ರೇಕ್ ಪಾಯಿಂಟ್ ಅಂಕಗಳನ್ನುಗಳಿಸುವಲ್ಲಿ ಬೆನೊಯ್ಟ್-ವಾವ್ರಿಂಕಾ ಜೋಡಿ ಎಡವಿತು. ಎರಡೂ ಜೋಡಿಗಳ ಸಮಬಲದ ಹೋರಾಟದ ನಡುವೆ ಈ ಸೆಟ್ ಟೈ ಬ್ರೇಕರ್‍ಗೆ ಬಂದು ನಿಂತಿತು. ಆನಂತರ ನಡೆದ ಹಣಾಹಣಿಯಲ್ಲಿ ಪಾರಮ್ಯ ಮೆರೆದ ಫ್ರಾನ್ಸ್-ಸ್ವಿರ್ಡರ್ಲೆಂಡ್ ಜೋಡಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಯಿತು.