ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಸೌದಿ ಮತ್ತು ಭಾರತದಲ್ಲಿ ನಡೆದ ಐಪಿಲ್ ಸರಣಿ ಏಳನೇ ಆವೃತ್ತಿಯ ವೇಳೆಯಲ್ಲಿ ಐಪಿಎಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ೧.೯೦ ಕೋತಿ ರೂ ಪರಿಹಾರ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಪ್ರೀಮ್ ಕೋರ್ಟ್ ನಿರ್ದೇಶನದ ಮೇರೆಗೆ ಬಿಸಿಸಿಐ-ಐಪಿಲ್ ಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಗವಾಸ್ಕರ್ ಅವರಿಗೆ, ಅಗತ್ಯ ವೇತನ ನೀಡುವಂತೆ ಕೂಡ ಬಿಸಿಸಿಐಗೆ ಕೋರ್ಟ್ ಸೂಚಿಸಿತ್ತು. ಹಲವಾರು ಮಾಧ್ಯಮಗಳ ಕೆಲಸಗಳನ್ನು ತೊರೆದು ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ದರಿಂದ ಈ ಪರಿಹಾರ ನೀಡುವಂತೆ ಬಿಸಿಸಿಐಗೆ ಸೂಚಿಸಿತ್ತು.
ಬಿಸಿಸಿಐ ಕಾರ್ಯನಿರ್ವಾಹಕ ಸಮಿತಿಯ ಮೂಲಗಳ ಪ್ರಕಾರ ಪರಿಹಾರ ಕೇಳಿ ಗವಾಸ್ಕರ್ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
"ಗವಾಸ್ಕರ್ ಅವರು ಬಿಸಿಸಿಐಗೆ ಪತ್ರ ಬರೆದಿದ್ದು, ಟಿವಿ ವೀಕ್ಷಣಾ ವರದಿಯನ್ನು ಒಳಪಟ್ಟಂತೆ ಹಲವಾರು ಮಾಧ್ಯಮ ಒಪ್ಪಂದಗಳಿಂದ ತಮಗೆ ಬರಬೇಕಿದ್ದ ಹಣವನ್ನು ತೊರೆದು ಐಪಿಎಲ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಕ್ಕೆ ತಾವು ತೊರೆದ ೧.೯೦ ಕೋಟಿಯಷ್ಟೇ ಪರಿಹಾರ ಬಿಸಿಸಿಐನಿಂದ ಕೇಳಿದ್ದಾರೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಹಣಕಾಸು ಸಮಿತಿಯ ಶಿಪಾರಸ್ಸಿನ ಪ್ರಕಾರ ಪರಿಹಾರವನ್ನು ನಿರ್ಧರಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ.