ಹೈದರಾಬಾದ್: ಪಂದ್ಯದ ಮೊದಲ ಅವಧಿಯಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ಪ್ರಾಬಲ್ಯ, ಎರಡನೇ ಅವಧಿಯಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ರೋಚಕ ಹೋರಾಟದ ಪರಿಣಾಮ ಪ್ರೋ ಕಬಡ್ಡಿ ಲೀಗ್‍ನ ಎರಡನೇ ಘಟ್ಟದ ಮೊದಲ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿತು.
ಹೈದರಾಬಾದ್ ನ ಗಾಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು 39-39 ಅಂಕ-ಗ-ಳಿಂದ ಡ್ರಾಗೆ ತೃಪ್ತಿಪಟ್ಟುಕೊಂಡವು.
ಪಂದ್ಯದ ಅಂತಿಮ ಐದು ನಿಮಿಷಗಳಲ್ಲಿ ಮೊದಲ ಬಾರಿಗೆ ಮುನ್ನಡೆ ಪಡೆದ ಜೈಪುರ ತಂಡ 39-34 ಅಂಕ-ಗಳ ಮುನ್ನಡೆಯಲ್ಲಿತ್ತು. ಆನಂತರ ಆಕ್ರಮಣಕಾರಿ ಮನೋಭಾವ ಬಿಟ್ಟು ಎಚ್ಚರ ತಪ್ಪಿದ ಪರಿಣಾಮ ಜೈಪುರ ಪಿಂಕ್ ಪ್ಯಾಂಥರ್ಸ್ ಕೈಯಲ್ಲಿದ್ದ ಜಯದ ಅವಕಾಶವನ್ನು ಕೈಚೆಲ್ಲಿತು. ಇನ್ನು ಪಂದ್ಯದ ಕೊನೆ ರೈಡ್ ವೇಳೆ ಜೈಪುರ ನಾಯಕ ಜಸ್ವೀರ್ ಸಿಂಗ್ ತಮ್ಮ ತಂಡ ಒಂದು ಅಂಕ ಮುನ್ನಡೆಯಲ್ಲಿದೆ ಎಂಬ ತಪ್ಪು ಲೆಕ್ಕಾಚಾರದಲ್ಲಿ ಅನಾವಶ್ಯಕವಾಗಿ ರೈಡ್ ಅನ್ನು ಬಿಟ್ಟುಕೊಟ್ಟರು. ಪಂದ್ಯ ಡ್ರಾ ಎಂದು ಘೋಷಿಸಿದ ನಂತರ ಪಿಂಕ್ ಪ್ಯಾಂಥರ್ಸ್‍ಗೆ ತಮ್ಮ ತಪ್ಪಿನ ಅರಿವಾಯಿತು. ಆದರೆ, ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿದ್ದ ಜೈಪುರ, ಮರು ಹೋರಾಟ ನಡೆಸಿತಾದರೂ ಡ್ರಾ ಮಾಡಿಕೊಳ್ಳಲಷ್ಟೇ ಶಕ್ತವಾಯಿತು. ಅತ್ಯದ್ಭುತ ಫಾರ್ಮ್ ನಲ್ಲಿರುವ ತೆಲುಗು ಟೈಟಾನ್ಸ್ ತಂಡ ಪಂದ್ಯದ ಮೊದಲಾರ್ಧದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು.
ಪಂದ್ಯದ ಆರಂಭಿಕ ನಿಮಿಷದಲ್ಲಿ ಮೊದಲ ಅಂಕ ಗಳಿಸುವ ಮೂಲಕ ಶುಭಾರಂಭ ಪಡೆದ ಟೈಟಾನ್ಸ್ ತಂಡ ನಿರಂತರವಾಗಿ ತನ್ನ ಮುನ್ನಡೆ ಕಾಯ್ದುಕೊಂಡಿತು. ಈ ಅವಧಿಯಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದ ಆತಿಥೇಯರು ಮೊದಲಾರ್ಧದಲ್ಲಿ ಮುನ್ನಡೆ ಪಡೆಯಿತು. ಇನ್ನು ಎರಡನೇ ಅವಧಿಯಲ್ಲಿ ಅಗತ್ಯವಾಗಿ ಎದುರಾಳಿಗೆ ಅವಕಾಶ ನೀಡಿದ್ದ ತೆಲುಗು ಪಂದ್ಯವನ್ನು ಕೈಬಿಟ್ಟಿತು. ಕೊನೆ ಗಳಿಗೆಯಲ್ಲಿ ಎದುರಾಳಿ ತಂಡದ ಸ್ವಯಂಕೃತ ಅಪರಾಧದಿಂದ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು.
ಮುಂಬೈ ಅಜೇಯ ಯಾತ್ರೆ: ಪ್ರಸಕ್ತ ಸಾಲಿನಲ್ಲಿ ಅತ್ಯದ್ಭುತ ಫಾರ್ಮ್ ನಲ್ಲಿರುವ ಯು ಮುಂಬಾ ತಂಡ ಟೂರ್ನಿ-ಯಲ್ಲಿ ತನ್ನ ಅಜೇಯ ಯಾತ್ರೆಯನ್ನು ಮುಂದುವರಿಸಿದೆ. ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆದರೆ, ಅಂತಿಮ 10 ನಿಮಿಷ ಗಳಲ್ಲಿ ಡೆಲ್ಲಿ ತಂಡದ ತಪ್ಪುಗಳನ್ನು ಬಳಸಿಕೊಂಡ ಮುಂಬೈ ಪಡೆ ಪಂದ್ಯದಲ್ಲಿ ಅತ್ಯುತ್ತಮ ಮುನ್ನಡೆ ಪಡೆದುಕೊಂಡು 29-25 ಅಂಕ-ಗಳ ಅಂತರದಲ್ಲಿ ಜಯಿಸಿತು.
ಈ ಮೂಲಕ ಮುಂಬೈ ತಂಡ ಟೂರ್ನಿ-ಯಲ್ಲಿ ಸತತ 8ನೇ ಜಯ ದಾಖಲಿಸಿದೆ.