ಚೆನ್ನೈ: ಈಗಾಗಲೇ ಆರಂಭಗೊಂಡಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ `ಎ' ತಂಡಗಳುಳ್ಳ ತ್ರಿಕೋನ ಸರಣಿಯಲ್ಲಿ ಮೊದಲ ಸೋಲನುಭವಿಸಿ ತತ್ತರಿಸಿರುವ ಭಾರತ `ಎ' ತಂಡಕ್ಕೆ ಭಾನುವಾರ ಎರಡನೇ ಸವಾಲು ಕಾದಿದ್ದು, ದಕ್ಷಿಣ ಆಫ್ರಿಕಾ `ಎ' ತಂಡದ ವಿರುದ್ಧದ ಪಂದ್ಯ ಅದಕ್ಕೆ ಮಹತ್ವಪೂರ್ಣವೆನಿಸಿದೆ.
ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಒತ್ತಡಕ್ಕೆ ಉನ್ಮುಕ್ತ್ ಚಾಂದ್ ಬಳಗ ಒಳಗಾಗಿದ್ದರೆ, ಇದೇ ಪರಿಸ್ಥಿತಿ ದ.ಆಫ್ರಿಕಾ ತಂಡಕ್ಕೂ ಇದೆ. ಏಕೆಂದರೆ ಆರಂಭಿಕ ಎರಡು ಪಂದ್ಯಗಳಲ್ಲಿ ಬಲಿಷ್ಟ ಆಸ್ಟ್ರೇಲಿಯಾ `ಎ' ತಂಡ ಜಯಭೇರಿ ಮೊಳಗಿಸಿದೆ. ಅನೌಪಚಾರಿಕ ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ತೋರಿದ ಪ್ರದರ್ಶನವನ್ನೇ ಗಮನಿಸುವುದಾದರೆ, ಧವಳ್ ಕುಲಕರ್ಣಿ ಹಾಗೂ ಸಂದೀಪ್ ಶರ್ಮಾ, ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಹಾಗೂ ಜೊ ಬರ್ನ್ಸ್ ಅವರನ್ನು ಕಟ್ಟಿಹಾಕುವಲ್ಲಿ ಆರಂಭಿsಕ ಯಶಸ್ಸು ಸಂಪಾದಿಸಿದರೂ, ಎಕ್ರಮೇಣ ಇದರಲ್ಲಿ ವಿಫಲರಾಗಿದ್ದಾರೆ.
ಇನ್ನು, ಬ್ಯಾಟಿಂಗ್‍ನಲ್ಲಿ ಉನ್ಮುಕ್ತ್ ಚಾಂದ್ ಹಾಗೂ ಕೇದಾರ್ ಜಾಧವ್ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದರೂ, ಮಾಯಾಂಕ್ ಅಗರ್ವಾಲ್, ಮನೀಶ್ ತಿವಾರಿ ಹಾಗೂ ಕರುಣ್ ನಾಯರ್ ಉತ್ತಮ ಮೊತ್ತ ಪೇರಿಸುವಲ್ಲಿ ವಿಫಲವಾಗಿದ್ದು, ಪುಟಿದೆದ್ದು ನಿಲ್ಲಬೇಕಾದ ಸಮಯ ಬಂದೊದಗಿದೆ. ಅತ್ತ, ಹರಿಣಗಳ ಪಡೆ ಅನುಭವಿಗಳಿಂದ ಬಲಿಷ್ಠವಾಗಿದೆ.