ಮುಂಬೈ: ಐಪಿಎಲ್ ಬೆಟ್ಟಿಂಗ್ ಹಗರಣದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಹಾಗೂ ರಾಜಸ್ಥಾನ ರಾಯಲ್ಸ್ (ಆರ್‍ಆರ್) ಫ್ರಾಂಚೈಸಿಗಳನ್ನು ಶಾಶ್ವತವಾಗಿ ರದ್ದುಗೊಳಿಸಲು ಬಿಸಿಸಿಐ ಮುಂದಾಗುವ ಸಾಧ್ಯತೆಗಳಿವೆ ಎಂದು `ಟೈಮ್ಸ್ ಆಫ್ ಇಂಡಿಯಾ ವರದಿ' ಮಾಡಿದೆ.
ಹಾಗೊಂದು ವೇಳೆ, ಸಿಎಸ್‍ಕೆ ಹಾಗೂ ಆರ್‍ಆರ್ ಫ್ರಾಂಚೈಸಿಗಳನ್ನು ರದ್ದುಗೊಳಿಸಿದರೆ, ಅವುಗಳ ಜಾಗಕ್ಕೆಮತ್ತೆರಡು ತಂಡಗಳನ್ನು ತರುವ ಆಲೋಚನೆ ಬಿಸಿಸಿಐಗೆ ಇದ್ದು, ಇದಕ್ಕಾಗಿ ಬಿಡ್ ಆಹ್ವಾನಿಸಬಹುದು. ಇದಲ್ಲದೆ, ಬಿಸಿಸಿಐ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ಕೊಚ್ಚಿ ಟಸ್ಕರ್ಸ್ ವಿರುದ್ಧವೂ ದಾವೆ ಸಲ್ಲಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಸಿಎಸ್‍ಕೆ, ಆರ್‍ಆರ್ ತಂಡಗಳನ್ನು ನಿಷೇಧಗೊಳಿಸಲು ಬಿಸಿಸಿಐ ಚಿಂತನೆ ನಡೆಸಿರುವುದರಿಂದ ಮುಂದಿನ ಐಪಿಎಲ್‍ನಲ್ಲಿ 6 ತಂಡಗಳು ಕಣಕ್ಕಿಳಿಯುತ್ತವೆ ಹಾಗೂ ಎರಡು ವಿದೇಶಿ ಫ್ರಾಂಚೈಸಿಗಳನ್ನು ಕರೆತರಲಾಗುತ್ತದೆ ಎಂಬುದಾಗಿ ಮಾಧ್ಯಮಗಳಲ್ಲಿ ಹರಿದಾಡಿದ್ದ ಸುದ್ದಿಗಳಿಗೆ ಬ್ರೇಕ್ ಬೀಳಲಿದೆ.
ಕಾರ್ಯಕಾರಿ ಸಮಿತಿ ನಿರ್ಧಾರ?: 2013ರ ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ನ್ಯಾ.ಆರ್.ಎಂ. ಲೋಧಾ ನೇತೃತ್ವದ ಸಮಿತಿ ನೀಡಿದ್ದ ತೀರ್ಪನ್ನು ಅಧ್ಯಯನ ಮಾಡಿ, ಮುಂದಿನ ವರ್ಷದ ಐಪಿಎಲ್ ಆಯೋಜಿಸಲು ಸೂಕ್ತ ಸಲಹೆಗಳನ್ನು ನೀಡವಂತೆ ಬಿಸಿಸಿಐ ಐವರು ಸದಸ್ಯರುಳ್ಳ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ನೇಮಿಸಿತ್ತು. ಈಗಾಗಲೇ ಆ ಸಮಿತಿ ಕಾರ್ಯ ನಿರ್ವಹಿಸುತ್ತಿದೆ.
ಈಗಾಗಲೇ, ಬಿಸಿಸಿಐ ಹಾಗೂ ಐಪಿಎಲ್ ಹೂಡಿಕೆದಾರರ, ಫ್ರಾಂಚೈಸಿಗಳ ಸಭೆಯನ್ನು ಸಮಿತಿ ನಡೆಸಿದೆ. ಸಭೆಯಲ್ಲಿ, ಹಲವಾರು ಹೂಡಿಕೆದಾರರು 2016ರ ಐಪಿಎಲ್ ಆವೃತ್ತಿಯಲ್ಲಿ ಎಂಟು ತಂಡಗಳನ್ನು ಆಡಿಸುವ ಬಗ್ಗೆ ಒಲವು ತೋರಿದ್ದಾರೆಂದು ಹೇಳಲಾಗಿದೆ. ಈ ಎಲ್ಲಾ ಅಂಶಗಳನ್ನೊಳಗೊಂಡ ತನ್ನ ವರದಿಯನ್ನು ಕಾರ್ಯಕಾರಿ ಮಂಡಳಿ ಶೀಘ್ರದಲ್ಲೇ ಬಿಸಿಸಿಐಗೆ ಸಲ್ಲಿಸಲಿದೆ.
29ಕ್ಕೆ ನಿರ್ಧಾರ?: ಆಗಸ್ಟ್ 29ರಂದು ಐಪಿಎಲ್ ಆಡಳಿತ ಮಂಡಳಿ ಸಭೆ ಸೇರಲಿದ್ದು, ಕಾರ್ಯಕಾರಿ ಸಮಿತಿಯ ವರದಿಯ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಿದೆ. ಆಗ, ಸಿಎಸ್‍ಕೆ ಹಾಗೂ ಆರ್‍ಆರ್ ಫ್ರಾಂಚೈಸಿಗಳ ರದ್ದತಿ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ.