ಕ್ರೀಡೆ

ಗಾಲೆ ಟೆಸ್ಟ್ ಗೆ ಮುರಳಿ ಅಲಭ್ಯ

ನವದೆಹಲಿ: ಟೀಂ ಇಂಡಿಯಾ ಆರಂಭಿಕ ಆಟಗಾರ ಮುರಳಿ ವಿಜಯ್, ಗಾಯದ ನಿಮಿತ್ತ ಬುಧವಾರದಿಂದ ಗಾಲೆಯಲ್ಲಿ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸ್ನಾಯು ಸೆಳೆತದಿಂದ ಬಳಲುತ್ತಿರುವ ಮುರಳಿ ವಿಜಯ್ ಅವರನ್ನು ಮೊದಲ ಟೆಸ್ಟ್ ನಿಂದ ಕೈ ಬಿಟ್ಟಿರುವುದನ್ನು ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಖಾತ್ರಿ ಪಡಿಸಿದ್ದಾರೆ. ಅವರ ಜಾಗಕ್ಕೆ ಕರ್ನಾಟಕದ ಆಟಗಾರ ಕೆ.ಎಲ್.ರಾಹುಲ್ ಸ್ಥಾನ ಪಡೆಯುವುದು ನಿಕ್ಕಿಯಾಗಿದೆ.

ಇತ್ತೀಚೆಗೆ, ಟೀಂ ಇಂಡಿಯಾ ಕೈ ಗೊಂಡಿದ್ದ ಜಿಂಬಾಬ್ವೆ ಪ್ರವಾಸದ ವೇಳೆಯೇ ಗಾಯದ ಸಮಸ್ಯೆಗೆ ತುತ್ತಾಗಿದ್ದ ಮುರಳಿ ವಿಜಯ್, ಶನಿವಾರ ಮುಕ್ತಾಯ ಕಂಡ ಭಾರತ ಹಾಗೂ ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ನಡುವಿನ ಪಂದ್ಯದ ವೇಳೆಯೂ ಸ್ನಾಯು ಸೆಳೆತದಿಂದ ಬಳಲಿದ್ದರು. ಹಾಗಾಗಿ, ಭಾರತದ ಎರಡೂ ಇನಿಂಗ್ಸ್ ಗಳಲ್ಲಿ ಅವರು ಕ್ರೀಸ್ ಗೆ ಇಳಿದಿರಲಿಲ್ಲ.

ಪೂಜಾರಗೆ ಕೊಕ್?
ಬದಲಾದ ಸನ್ನಿವೇಶದಲ್ಲಿ ಚೇತೇಶ್ವರ ಪೂಜಾರ ಟೀಂ ಇಂಡಿಯಾದ ಅಂತಿಮ ಹನ್ನೊಂದರಲ್ಲಿ ಕಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಗಳಿವೆ ಎಂದು ರವಿಶಾಸ್ತ್ರಿ ಹೇಳಿರುವುದು ಈ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ.

ರ್ಯಾಕಿಂಗ್: 3ನೇ ಸ್ಥಾನದ ಮೇಲೆ ಕಣ್ಣು
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 3-0 ಅಂತರದಲ್ಲಿ ಗೆದ್ದರೆ, ಅಂತಾರಾಷ್ಟ್ರೀಯ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅದು ಈಗಿರುವ 5ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿಯಲಿದ್ದು, ಕೊಹ್ಲಿ ಪಡೆ ಇದರತ್ತ ಗಂಭೀರ ಚಿತ್ತ ಹರಿಸಿದೆ. ಆದರೆ, ಇದು ಪ್ರಸ್ತುತ ನಡೆಯುತ್ತಿರುವ ಆ್ಯಶಸ್ ಸರಣಿಯ ಒಟ್ಟಾರೆ ಫಲಿತಾಂಶದ ಮೇಲೆ ಅವಲಂಬಿತವಾಗಲಿದೆ. ಆ್ಯಶಸ್ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿಯಿದ್ದು, ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, ಇಂಗ್ಲೆಂಡ್ ತಂಡವನ್ನು ಮಣಿಸಿದರೆ, ಭಾರತಕ್ಕೆ ರ್ಯಾಂಕಿಂಗ್ ಪಟ್ಟಿಯಲ್ಲಿ ಮೇಲೆ ಸಾಗಲು ಹೆಚ್ಚು ಅನುಕೂಲವಾಗುತ್ತದೆ. ಆಗ, ಲಂಕಾ ವಿರುದ್ಧ 2-1ರ ಅಂತರದಲ್ಲಿ ಗೆದ್ದರೂ ಸಾಕು ಅದಕ್ಕೆ 3 ಅಂಕಗಳು ಲಭ್ಯವಾಗಲಿದ್ದು, ಆಗ 3ನೇ ಸ್ಥಾನಕ್ಕೇರುವುದು ಖಚಿತ ಎಂದು ಹೇಳಲಾಗಿದೆ.

SCROLL FOR NEXT