ಸೌರವ್ ಕೊಠಾರಿ(ಸಂಗ್ರಹ ಚಿತ್ರ)
ನವದೆಹಲಿ: ಕೇಂದ್ರದ ಪ್ರತಿಷ್ಠಿತ ಅರ್ಜುನ ಕ್ರೀಡಾ ಪ್ರಶಸ್ತಿ ಪಟ್ಟಿಯಿಂದ ಸೌರವ್ ಕೊಠಾರಿ ಹಾಗೂ ಚಿತ್ರಾ ಮಹಿಮಾರಾಜ್ ಅವರನ್ನು ಕೈಬಿಟ್ಟಿರುವ ಕ್ರಮಕ್ಕೆ ಭಾರತೀಯ ಬಿಲಿಯಡ್ರ್ಸ್ ಹಾಗೂ ಸ್ನೂಕರ್ ಒಕ್ಕೂಟ (ಬಿಎಸ್ಎಫ್ಐ) ಆಕ್ಷೇಪ ವ್ಯಕ್ತಪಡಿಸಿದೆ.
ಕಳೆದ ಸಾಲಿನ ಏಷ್ಯನ್ ಬಿಲಿಯಡ್ರ್ಸ್ ಚಾಂಪಿಯನ್ ಕೊಠಾರಿ ಹಾಗೂ ಎರಡು ಬಾರಿಯ ವಿಶ್ವ ಬಿಲಿಯಡ್ರ್ಸ್ ಹಾಗೂ ಸ್ನೂಕರ್ ಚಾಂಪಿಯನ್ ಚಿತ್ರಾಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಬಿಎಸ್ಎಫ್ಐ ಶಿಫಾರಸು ಪಟ್ಟಿ ನೀಡಿತ್ತು. ಆದರೆ ಮಂಗಳವಾರವಷ್ಟೇ ಪ್ರಕಟವಾಗಿರುವ 17 ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಈ ಇಬ್ಬರ ಹೆಸರನ್ನೂ ಕೈ ಬಿಡಲಾಗಿದೆ.
ಬಿಲಿಯಡ್ರ್ಸ್ ಇಲ್ಲವೇ ಸ್ನೂಕರ್ ಕ್ರೀಡೆಯನ್ನು ಕ್ಷುಲ್ಲಕವಾಗಿ ಪರಿಗಣಿಸಿರುವುದು ನಿಜವಾಗಿಯೂ ದುರದೃಷ್ಟಕರ. ಆಗಿರುವ ಪ್ರಮಾದವನ್ನು ಸರಿಪಡಿಸುವ ದಿಸೆಯಲ್ಲಿ ಕ್ರೀಡಾ ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ದೇಶದ ಎಲ್ಲಾ ಮಾಧ್ಯಮ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಬಿಎಸ್ಎಸಫ್ಐ ಕಾರ್ಯದರ್ಶಿ ಎಸ್. ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.