ಬೆಂಗಳೂರು: ಪಾದರಸದಂತೆ ರೈಡರ್‍ಗಳ ಪ್ರದರ್ಶನ, ತಮ್ಮ ಬಾಹುಬಲದಿಂದ ಎದುರಾಳಿ ಆಟಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾದ ರಕ್ಷಣಾತ್ಮಕ ವಿಭಾಗದ ಆಟಗಾರರು. ಈ ಎರಡು ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ ಜಯ ಸಾಧಿಸಿ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ.
ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ತವರಿನ ಅಭಿಮಾನಿಗಳು ಸೂರು ಕಿತ್ತುಹೋಗುವಂತೆ ಕೂಗುತ್ತಾ ಪೊ್ರೀತ್ಸಾಹ ನೀಡುತ್ತಿದ್ದರೆ, ಮತ್ತೊಂದೆಡೆ ತನ್ನ ಪ್ರಭುತ್ವಯುತ ಪ್ರದರ್ಶನದಿಂದ ಬೆಂಗಳೂರು ಬುಲ್ಸ್ ಆಟಗಾರರು ಅಭಿಮಾನಿಗಳನ್ನು ರಂಜಿಸಿದರು. ಪರಿಣಾಮ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 43-29 ಅಂಕಗಳ ಅಂತರದಲ್ಲಿ ಪ್ರಬಲ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು.
ಆ ಮೂಲಕ ಟೈಟಾನ್ಸ್ ವಿರುದ್ಧ ಆಡಿದ ನಾಲ್ಕು ಪಂದ್ಯಗಳ ಪೈಕಿ 3ರಲ್ಲಿ ಜಯ ಹಾಗೂ 1ರಲ್ಲಿ ರೋಚಕ ಟೈ ಸಾಧಿಸಿ ಅಜೇಯ ಯಾತ್ರೆ ಮುಂದುವರಿಸಿದೆ. ಈ ಗೆಲುವಿನ ನಂತರ ಅಭಿಮಾನಿಗಳು ಕ್ರೀಡಾಂಗಣದ ಹೊರಗೆ ಪಟಾಕಿ ಹೊಡೆದು ಸಂಭ್ರಮಿಸಿದರು.
ಸೆಮಿಫೈನಲ್‍ಗೆ ಬುಲ್ಸ್
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ ತಂಡ ಸೋಲನುಭವಿಸಿದ್ದು, ಮತ್ತೊಂದೆಡೆ ಈ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧದ ಗೆಲುವಿನಿಂದ ಬೆಂಗಳೂರು ಬುಲ್ಸ್ ತಂಡ ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಸೆಮಿಫೈನಲ್ ಸುತ್ತಿನಲ್ಲಿ ಬಹುತೇಕ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಪಾಟ್ನಾ ಪೈರೆಟ್ಸ್ ಜತೆಗೆ ತೀವ್ರ ಪೈಪೋಟಿ ಹೊಂದಿದ್ದ ಬೆಂಗಳೂರು ತಂಡ ಶನಿವಾರದ ಫಲಿತಾಂಶದೊಂದಿಗೆ ಅಂಕಪಟ್ಟಿಯಲ್ಲಿ 43 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಪಾಟ್ನಾಗೆ ಸೋಲು ಗೆಲ್ಲಲೇಬೇಕಾದ ಪಂದ್ಯದಲಿ ಉತ್ತಮ ಆರಂಭ ಸಿಕ್ಕಿತಾದರೂ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾದ ಪಾಟ್ನಾ ಪೈರೆಟ್ಸ್ ಸೆಮಿಫೈನಲ್ ಹಾದಿಯನ್ನು ಜಟಿಲವಾಗಿಸಿಕೊಂಡಿದೆ.
ಟೂರ್ನಿಯ ಬೆಂಗಳೂರಿನ ಹಂತದ ಕಡೇ ದಿನವಾದ ಶನಿವಾರ ಕಠೀರವ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವು 32-27 ಅಂಕಗಳ ಅಂತರದಲ್ಲಿ ಪಾಟ್ನಾ ಪೈರೆಟ್ಸ್ ತಂಡವನ್ನು ಮಣಿಸಿತು. ಈ ಮೂಲಕ ಅದು ತನ್ನ ವಿಜಯಯಾತ್ರೆಯನ್ನು ಮುಂದುವರೆಸಿತು.
ದ್ರಾವಿಡ್ ಉಪಸ್ಥಿತಿ
ಬೆಂಗಳೂರಿನಲ್ಲಿ ಟೂರ್ನಿಯ ಕೊನೆಯ ಪಂದ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕ್ರೀಡೆ, ಸಿನಿಮಾ ಹಾಗೂ ರಾಜಕೀಯ ಗಣ್ಯರು ಪಂದ್ಯವನ್ನು ವೀಕ್ಷಿಸಿ ಆನಂದಿಸಿದರು. ಭಾರತ ತಂಡದ ಮಾಜಿ ನಾಯಕ ಕಿರಿಯ ತಂಡದ ಕೋಚ್ ರಾಹುಲ್ ದ್ರಾವಿಡ್ ತಮ್ಮ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಇನ್ನು ನಟ ಶ್ರೀ ಮುರಳಿ, ನಟಿ ಪ್ರಣೀತಾ ಆಗಮಿಸಿದ್ದರು. ಇನ್ನು ಕಾಂಗ್ರೆಸ್‍ನ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ, ಇಂಧನ ಸಚಿವ ಡಿ.ಕೆ ಶಿವಕುಮಾರ್, ಬಿಜೆಪಿ ಮುಖಂಡ ಸಿ.ಟಿ ರವಿ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿ, ದೇಶಿಯ ಕ್ರೀಡೆಗೆ ಪ್ರೋತ್ಸಾಹ ನೀಡಿದರು.