ಪುಣೆ: ರೈಡರ್‍ಗಳಾದ ದೀಪಕ್ ದಾಹಿಯಾ ಹಾಗೂ ರಾಕೇಶ್ ನರ್ವಾಲ್‍ರ ದಿಟ್ಟ ಹೋರಾಟದ ಫಲವಾಗಿ, ಬೆಂಗಳೂರು ಬುಲ್ಸ್ ತಂಡ ಬುಧವಾರ ನಡೆದ ಪ್ರೊ ಕಬಡ್ಡಿ ಪಂದ್ಯದ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಪುನೇರಿ ಪಲ್ಟಾನ್ ತಂಡವನ್ನು 31-30 ಅಂಕಗಳ ಅಂತರದಲ್ಲಿ ಸೋಲಿಸಿತು.
ಈಗಾಗಲೇ ಸೆಮಿಫೈನಲ್‍ಗೆ ಕಾಲಿಟ್ಟಿರುವ ಬೆಂಗಳೂರು ಬುಲ್ಸ್ ತಂಡ ಹಾಗೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸುವ ಮೂಲಕ ಈಗಾಗಲೇ ಟೂರ್ನಿಯಿಂದ ಆಚೆ ಸರಿದಿರುವ ಪುನೇರಿ ಪಲ್ಟಾನ್ಸ್ ತಂಡಗಳ ನಡುವಿನ ಈ ಪಂದ್ಯ ಔಪಚಾರಿಕವಾಗಿ ಮಾರ್ಪಟ್ಟಿತ್ತಾದರೂ, ಆತಿಥೇಯರಿಗೆ ಗೆಲುವಿನ ಮೂಲಕ ಈ ಬಾರಿಯ ಲೀಗ್‍ಗೆ ಒಂದು ಸಮಾಧಾನದ ವಿದಾಯ ಹೇಳುವ ಅವಕಾಶವಿತ್ತು. ಆದರೆ, ಗೆಲುವು ಅದಕ್ಕೆ ದಕ್ಕಲಿಲ್ಲ.
ಅತ್ತ, ಈ ಪಂದ್ಯದಲ್ಲೂ ಜಯ ಸಾಧಿಸಿರುವ ಬೆಂಗಳೂರು ತಂಡ, ಆ. 21ರಂದು ನಡೆಯಲಿರುವ ಲೀಗ್‍ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು ಎದುರಿಸಲಿದೆ. ಪಂದ್ಯದ ಆರಂಭದಿಂದಲೂ ಉತ್ತಮವಾಗಿ ಅಂಕಗಳನ್ನು ಪೇರಿಸುತ್ತಾ ಸಾಗಿದ ಪುಣೆ ತಂಡ, ಪಂದ್ಯದ 15ನೇ ನಿಮಿಷದವರೆಗೂ ಮುನ್ನಡೆ ಸಾಧಿಸಿತ್ತು. ಆದರೆ, ಆನಂತರ ಪುಟಿದೆದ್ದ ಬೆಂಗಳೂರು ತಂಡದ ಆಟಗಾರರು ಉತ್ತಮ ಪೈಪೋಟಿ ನೀಡದರಲ್ಲದೆ, ಅಂಕಗಳಿಕೆಯಲ್ಲಿ ಪುಣೆಯನ್ನು ಹಿಂದಿಕ್ಕಿದರು.
ಆದರೂ, ಕೆಲವಾರು ವಿಫಲ ರೈಡ್‍ಗಳ ಮೂಲಕ ಪುಣೆಗೆ ಅಂಕಗಳನ್ನು ಧಾರೆಯೆರೆದರು. ಇದರ ಲಾಭ ಪಡೆದ ಪುಣೆ ತಂಡವೂ ಉತ್ತಮ ಪೈಪೋಟಿ ನೀಡಿತು. ಆದರೂ, ಅಲ್ಲಲ್ಲಿ ಎಡವಿದರೂ ಉತ್ತಮವಾಗಿ ಪ್ರತಿರೋಧ ತೋರುತ್ತಾ ಸಾಗಿದ ಬೆಂಗಳೂರು ತಂಡ, ಅಂತಿಮವಾಗಿ ಗೆಲುವು ದಾಖಲಿಸಿತು.
ಪ್ಲೇ ಆಫ್ ನಿಂದ ಜೈಪುರ ಹೊರಕ್ಕೆ ನಾಯಕ ಸಂದೀಪ್ ನರ್ವಾಲ್, ಗುರ್ವಿಂದರ್ ಸಿಂಗ್ ಹಾಗೂ ಟೇ ಡಿಯೊಕ್ ಇವೊಮ್ರ ಆಕ್ರಮಣಕಾರಿ ಹೋರಾಟದ ಫಲವಾಗಿ, ಬುಧವಾರ ನಡೆದ ಪ್ರೊ ಕಬಡ್ಡಿ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ, ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ವಿರುದ್ಧ 24-21 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು. ಈ ಜಯದಿಂದಾಗಿ, ಮಂಗಳವಾರ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಪಾಟ್ನಾ ತಂಡ, 4ನೇ ಸ್ಥಾನದಲ್ಲಿದ್ದ ಜೈಪುರ ತಂಡವನ್ನು ಕೆಳಕ್ಕೆ ತಳ್ಳಿ ಅದರ ಸ್ಥಾನವನ್ನು ಆಕ್ರಮಿಸಿಕೊಂಡಿದೆಯಲ್ಲದೆ ಜೈಪುರವನ್ನು ಹಿಂದಿಕ್ಕಿ ಪ್ಲೇಆಫ್ ಹಂತಕ್ಕೆ ಕಾಲಿಟ್ಟಿದೆ.