ಕೊಲಂಬೋ: ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ತಂಡ ನೀಡಿರುವ 413 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ಶ್ರೀಲಂಕಾಗೆ ಆರಂಭಿಕ ಆಘಾತ ಎದುರಾಗಿದ್ದು ದಿನಾಂತ್ಯದ ಆಟಕ್ಕೆ 72 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.
ಆ.24 ರಂದು ಎರಡನೆ ಟೆಸ್ಟ್ ಪಂದ್ಯಾವಳಿಯ ಅಂತಿಮದಿನವಾಗಿದ್ದು ಭಾರತದ ವಿರುದ್ಧ ಗೆಲ್ಲಲು ಶ್ರೀಲಂಕಾಗೆ ಇನ್ನೂ 341 ರನ್ ಗಳನ್ನು ಕಲೆಹಾಕಬೇಕಿದೆ. ಭಾರತದ ಪರ ಆಫ್ ಸ್ಪಿನ್ನರ್ ಗಳು ಶ್ರೀಲಂಕಾಗೆ ಆರಂಭಿಕ ಆಘಾತ ನೀಡಿದ್ದಾರೆ. ಶ್ರೀಲಂಕಾ ಕೇವಲ 8 ರನ್ ಗಳನ್ನು ಪೇರಿಸಿದ್ದಾಗ ಕುಶಾಲ್ ಸಿಲ್ವಾ, ಸ್ಟುವರ್ಟ್ ಬಿನ್ನಿ ಗೆ ಕ್ಯಾಚ್ ನೀಡಿ ಔಟಾದರು. ಇನ್ನು ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಸಂಗಕ್ಕಾರ ಪೆವಿಲಿಯನ್ ನತ್ತ ಬಂದಾಗ ಭಾರತದ ಆಟಗಾರರು ಹಾಗೂ ಅಂಪೈರ್ ಗಳು ಗೌರವ ನೀಡಿದರು.
8 ವಿಕೆಟ್ ಗಳಲ್ಲಿ ಶ್ರೀಲಂಕಾ 314 ರನ್ ಗಳ ಗುರಿ ಮುಟ್ಟಬೇಕಿದೆ. ಶ್ರೀಲಂಕಾ ಈ ಗುರಿಯನ್ನು ದಾಟಿದರೆ ಟೆಸ್ಟ್ ಇತಿಹಾಸದಲ್ಲೇ 3 ನೇ ಅತ್ಯಂತ ಗರಿಷ್ಠ ಮೊತ್ತವನ್ನು ದಾಟಿದ ಹೆಗ್ಗಳಿಕೆಗೆ ಶ್ರೀಲಂಕಾ ಪಾತ್ರವಾಗಲಿದೆ. 12 ವರ್ಷಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡ 418 ರನ್ ಗುರಿ ದಾಟಿತ್ತು. 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 414 ರನ್ ಗುರಿ ಮುಟ್ಟಿತ್ತು.