ಲಾಹೋರ್: ಭಾರತ- ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವಿನ ದ್ವಿಪಕ್ಷೀಯ ಮಾತುಕತೆ ರದ್ದುಗೊಂಡಿರುವುದು ಕ್ರಿಕೆಟ್ ಸರಣಿಯ ಮೇಲೂ ಪರಿಣಾಮ ಬೀರಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ಭಾರತ-ಪಾಕಿಸ್ತಾನದ ನಡುವೆ ಸರಣಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಉದ್ದೇಶಿಸಲಾಗಿತ್ತು, ಆದರೆ ಅದು ನಡೆಯುವ ಸಾಧ್ಯತೆಗಳು ಕಡಿಮೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂದಳಿ ಅಧ್ಯಕ್ಷ ಶಹರ್ಯಾರ್ ಖಾನ್ ತಿಳಿಸಿದ್ದಾರೆ.
ಕ್ರಿಕೆಟ್ ಒಪ್ಪಂದವನ್ನು ಉಳಿಸಿಕೊಳ್ಳಲು ಪಾಕಿಸ್ತಾನ ನಮ್ಯತೆ ತೋರಿಸಿ ಭಾರತದೊಂದಿಗಿನ ಕ್ರಿಕೆಟ್ ಸರಣಿಯನ್ನು ಮುಂದುವರೆಸಬೇಕು ಎಂದು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನವಾಗಿ ನೇಮಕವಾಗಿರುವ ಜಹೀರ್ ಅಬ್ಬಾಸ್ ಅಭಿಪ್ರಾಯಪಟ್ಟಿದ್ದರು, ಆದರೆ ಪಾಕಿಸ್ತಾನ ಅಧ್ಯಕ್ಷ ಶಹರ್ಯಾರ್ ಖಾನ್ ಐಸಿಸಿ ಅಧ್ಯಕ್ಷರ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಅಕ್ಟೋಬರ್ ನಲ್ಲಿ ಬಿಸಿಸಿಐ ಕೈಗೊಳ್ಳಲಿರುವ ಅಂತಿಮ ನಿರ್ಧಾರದವರೆಗೂ ಕಾಡು ನೋಡುವುದಾಗಿ ಶಹರ್ಯಾರ್ ಖಾನ್ ತಿಳಿಸಿದ್ದಾರೆ.
ಪಾಕಿಸ್ತಾನ ದಾವೂದ್ ಇಬ್ರಾಹಿಂ ನ ರಕ್ಷಣೆ ಮಾಡುವುದು ಹಾಗೂ ಕಾಶ್ಮೀರಿ ಪ್ರತ್ಯೆಕತಾವಾದಿಗಳೊಂದಿಗೆ ಸಭೆ ನಡೆಸುವ ನಿಲುವನ್ನು ಕೈಬಿಡುವವರೆಗೂ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಸರಣಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಬಿಸಿಸಿಐ ನ ಕಾರ್ಯದರ್ಶಿ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದರು.