ಪುಣೆ: ನಿರ್ಣಾಯಕವಾಗಿರುವ ಮಹತ್ವಪೂರ್ಣ ಪಂದ್ಯದ ಮೊದಲ ದಿನವೇ ಪ್ರಾಬಲ್ಯ ಮೆರೆದಿರುವ ಪ್ರವಾಸಿ ಕರ್ನಾಟಕ, ರಣಜಿ ಪಂದ್ಯಾವಳಿಯ ತನ್ನ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಮಹಾರಾಷ್ಟ್ರವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿ ಸುಸ್ಥಿತಿ ಕಾದುಕೊಂಡಿತು. ಇಲ್ಲಿನ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ವೇಗದ ಬೌಲಿಂಗ್‍ಗೆ ತಬ್ಬಿಬ್ಬಾದ ಮಹಾರಾಷ್ಟ್ರ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 62.4 ಓವರ್ ಗಳಲ್ಲಿ 212 ರನ್‍ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಪ್ರವಾಸಿ ಕರ್ನಾಟಕ 19 ಓವರ್ ಗಳಲ್ಲಿ 1 ವಿಕೆಟ್‍ಗೆ 50 ರನ್ ಮಾಡಿ 162 ರನ್ ಹಿನ್ನಡೆಯಲ್ಲಿದೆ. ಆರಂಭಿಕ ಆರ್. ಸಮರ್ಥ್ (20)ವೇಗಿ ಶ್ರೀಕಾಂತ್ ಮುಂಡೆ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಕೇದಾರ್ ಜಾಧವ್‍ಗೆ ಕ್ಯಾಚಿತ್ತು ಕ್ರೀಸ್ ತೊರೆದ ನಂತರ ಕ್ರೀಸ್ ತೊರೆದ ನಂತರ ಮತ್ತೋರ್ವ ಆರಂಭಿಕ ಮಯಾಂಕ್ ಅಗರ್ವಾಲ್ (25) ಮತ್ತು ರಾಬಿನ್ ಉತ್ತಪ್ಪ 1 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ನಾಕೌಟ್ ಹಂತ ತಲುಪಲು ಈ ಪಂದ್ಯವನ್ನು ಗೆಲ್ಲಲೇ ಬೇಕಾಗಿರುವ ವಿನಯ್ ಪಡೆ, ಕನಿಷ್ಠ ಇನ್ನಿಂಗ್ಸ್ ಮುನ್ನಡೆಯನ್ನಾದರೂ ಪಡೆಯಲೇಬೇಕಾದ ಒತ್ತಡ ದಲ್ಲಿದೆ. ಪಂದ್ಯದ ಮೊದಲ ದಿನದಂದು ಸಂಪೂರ್ಣ ಪಾರಮ್ಯ ಮೆರೆದಿರುವ ಅದು, ಎರಡನೇ ದಿನದಾಟದಂದು ಬೃಹತ್ ಮೊತ್ತ ಕಲೆಹಾಕಿ ಮಹಾರಾಷ್ಟ್ರ ವಿರುದ್ಧ ಗೆಲುವು ಸಾಧಿಸಲು ಲೆಕ್ಕಾಚಾರ ಹಾಕಿದ್ದು, ಬ್ಯಾಟ್ಸ್‍ಮನ್‍ಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ.
ದಿಢೀರ್ ಕುಸಿತ: ಇನ್ನು ಬೆಳಿಗ್ಗೆ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್, ಮಹಾರಾಷ್ಟ್ರವ ನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ದಿಟ್ಟ ಆರಂಭ ಕಂಡ ಮಹಾರಾಷ್ಟ್ರ ಕ್ರಮೇಣ ದಿಢೀರ್ ಕುಸಿತ ಕಂಡಿತು. ಆರಂಭಿಕರಾದ ಸ್ವಪ್ನಿಲ್ ಗುಗಾಲೆ (30) ಮತ್ತು ಸಂಗ್ರಾಮ್ (19) ಮೊದಲ ವಿಕೆಟ್‍ಗೆ 50 ರನ್‍ಗಳ ಕಾಣಿಕೆ ನೀಡುವುದರೊಂದಿಗೆ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಆದರೆ, 13ನೇ ಓವರ್‍ನ ಕೊನೆಯ ಎಸೆತದಲ್ಲಿ ಸ್ವಪ್ನಿಲ್ ಅವರನ್ನು ಪೆವಿಲಿಯನ್‍ಗೆ ಅಟ್ಟಿದ ಎಸೆತದಲ್ಲಿ ಸ್ವಪ್ನಿಲ್ ಅವರನ್ನು ಪೆವಿಲಿಯನ್ ಗೆ ಅಟ್ಟಿದ ಶ್ರೇಯಸ್ ಗೋಪಾಲ್, ಮಹಾರಾಷ್ಟ್ರಕ್ಕೆ ಪೆಟ್ಟು ನೀಡಿದರು. ಇದರ ಬೆನ್ನಲ್ಲೇ ಆತೀತ್ಕರ್ ಮತ್ತು ಚಿರಾಗ್ ಖುರಾನ (10) ಅವರನ್ನು ಬಲಿಪಡೆದ ಎಸ್. ಅರವಿಂದ್ ಮಹಾರಾಷ್ಟ್ರಕ್ಕೆ ಡಬಲ್ ಹೊಡೆತ ನೀಡಿದರು ಇತ್ತ ರಾಹುಲ್ ತ್ರಿಪಾಠಿ (2) ವೇಗಿ ಶರತ್ ಬೌಲಿಂಗ್‍ನಲ್ಲಿ ವಿಕೆಟ್‍ಕೀಪರ್ ಸಿ.ಎಂ. ಗೌತಮ್ ಗೆ ಕ್ಯಾಚಿತ್ತು ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದರು.
ಮಧ್ಯಾಹ್ನ ಭೋಜನ ವಿರಾಮದ ಹೊತ್ತಿಗೆ 31 ಓವರ್ ಗಳಲ್ಲಿ 83 ರನ್ ಗಳಿಗೆ ಪ್ರಮುಖ ವಿಕೆಟ್ ಕಳೆದುಕೊಂಡ ಮಹಾರಾಷ್ಟ್ರ ತೀವ್ರ ಹಿನ್ನಡೆ ಅನುಭವಿಸಿತು. ಆಸರೆಯಾದ ಬಾವ್ನೆ: ಭೋಜನ ವಿರಾಮದ ನಂತರಆಡಲಿಳಿದ ಮಹಾರಾಷ್ಟ್ರ ಮತ್ತೊಮ್ಮೆ ಎಡವಿತು. ನಾಯಕ ಕೇದಾರ್ ಜಾಧವ್ (11) ಅವರ ವಿಕೆಟ್ ಪಡೆದ ಎಚ್ ಎಸ್ ಶರತ್, ಕರ್ನಾಟಕ ಪಾಳಯದಲ್ಲಿ ಹರ್ಷವೆಬ್ಬಿಸಿದರು. ಪ್ರಮುಖ ವಿಕೆಟ್ ಕಳೆದುಕೊಂಡ ಮಹಾರಾಷ್ಟ್ರಕ್ಕೆ ಆಸರೆಯಾಗಿ ಬಂದದ್ದು ಅಂಕಿತ್ ಬಾವ್ನೆ (87: 158 ಎಸೆತ, 8 ಬೌಂಡರಿ, 5 ಸಿಕ್ಸರ್). ನಿಧಾನಗತಿಯಲ್ಲಿ ಆಡುತ್ತಲೇ ಆಕ್ರಮಣಕಾರಿಯಾಗಿ ಅರ್ಧಶತಕ ಪೂರೈಸಿದ ಅವರು ಅವರು ಕೊನೆಗೂ ಅಜೇಯರಾಗುಳಿದರು. ವಿ.ವಿ. ಮೋರೆ (25) ಜತೆಗೆ 6ನೇ ವಿಕೆಟ್‍ಗೆ 122 ರನ್ ಕಲೆಹಾಕಿದ ಬಾವ್ನೆ, ತಂಡ ಇನ್ನಷ್ಟು ಅಲ್ಪ ಮೊತ್ತಕ್ಕೆ ಕುಸಿಯದಂತೆ ಪಾರು ಮಾಡಿದರು. ಆದರೆ, ಅಪಾಯಕಾರಿಯಾಗಿ ಬೆಳೆಯುದ್ದ ಈ ಜೋಡಿಯನ್ನು ಮುರಿಯಲು ನಿಶ್ಚಯಿಸಿ ದಾಳಿಗಿಳಿದ ವಿನಯ್ ಕುಮಾರ್, ಮೋರೆಗೆ ಪೆವಿಲಿ ಯನ್ ದಾರಿ ತೋರಿಸಿ ಮತ್ತೆ ಕರ್ನಾಟಕ ಮೇಲುಗೈ ಸಾಧಿಸಲು ನೆರವಾದರು. ಮೋರೆ ನಿರ್ಗಮನದ ನಂತರ ಯಾವೊಬ್ಬ ಆಟಗಾರನೂ ಎರಡಂಕಿ ದಾಟದಂತೆ ನೋಡಿಕೊಂಡ ಕರ್ನಾಟಕ ಮಹಾರಾಷ್ಟ್ರವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶ ಕಂಡಿತು. ರಾಜ್ಯದ ಪರ ಎಸ್. ಅರವಿಂದ್ 3 ವಿಕೆಟ್ ಗಳಿಸಿದರೆ, ವಿನಯ್, ಶರತ್ ಮತ್ತು ಮಿಥುನ್ ತಲಾ 2 ಹಾಗೂ ಸ್ಪಿನ್ನರ್ ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics