ನವದೆಹಲಿ: ವಾರ್ಷಿಕ ಕ್ರೀಡಾ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸುವ ಆಹ್ವಾನವನ್ನು ಸ್ವೀಕರಿಸಿ ಬಳಿಕ ದುಬಾರಿ ಬೇಡಿಕೆ ಇಟ್ಟ ಕಾರಣಕ್ಕಾಗಿ ಭಾರತದ ನಂ.1 ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ಮಧ್ಯಪ್ರದೇಶ ಸರ್ಕಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಾನಿಯಾ ಅವರನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ಸಾನಿಯಾ ಕೂಡ ಒಪ್ಪಿಕೊಂಡಿದ್ದರೆನ್ನಲಾಗಿದ್ದು, ಆದರೆ, ತನ್ನ ಉಪಸ್ಥಿತಿಗೆ ಪ್ರತಿಯಾಗಿ 75 ಸಾವಿರ ರೂ. ಮೌಲ್ಯದ ಮೇಕಪ್ ಕಿಟ್ ಅಲ್ಲದೆ, ಕಾರ್ಯಕ್ರಮ ನಡೆಯುವ ಭೋಪಾಲ್‍ಗೆ ಅಪ್ ಆ್ಯಂಡ್ ಡೌನ್ ಪ್ರಯಾಣವನ್ನು ಚಾರ್ಟರ್ಡ್ ವಿಮಾನದಲ್ಲೇ ವ್ಯವಸ್ಥೆ ಕಲ್ಪಿಸುವುದರ ಜತೆಗೆ ತನ್ನ ಐವರು ಸಹಾಯಕರಿಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟುಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.
ಸಾನಿಯಾ ನೀಡಿದ ಈ ಬೇಡಿಕೆ ಪಟ್ಟಿಯನ್ನು ಕಂಡ ಮಧ್ಯಪ್ರದೇಶ ಮರು ಮಾತಾಡದೆ, ಶನಿವಾರದಂದು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಂಗಳವಾರವೇ ನಡೆಸಲು ನಿರ್ಧರಿಸಿದೆ. ಜತೆಗೆ ಮುಖ್ಯ ಅತಿಥಿ ಸ್ಥಾನಕ್ಕೆ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಅವರಿಗೆ ಆಹ್ವಾನ ನೀಡಿದೆ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೆ, ಸಾನಿಯಾ ಉಳಿದುಕೊಳ್ಳಲು ಪಂಚತಾರಾ ಹೋಟೆಲ್‍ನ ವ್ಯವಸ್ಥೆಯನ್ನು ಕೂಡ ಮಧ್ಯಪ್ರದೇಶ ಸರ್ಕಾರ ಕಲ್ಪಿಸಬೇಕಿತ್ತು. ಈ ಬೇಡಿಕೆಗೆ ಅದು ಒಪ್ಪಿತ್ತಾದರೂ, ಮಿಕ್ಕ ಕೆಲ ಬೇಡಿಕೆ ದುಬಾರಿಯಾಗಿದ್ದರಿಂದ ಅವರನ್ನು ಕೈಬಿಡಲು ನಿರ್ಧರಿಸಿತೆಂದು ಗೊತ್ತಾಗಿದೆ. ಸಾನಿಯಾ ಪ್ರತಿಕ್ರಿಯೆಗೆ ಸಿಕ್ಕಿಲ್ಲ.