ನವದೆಹಲಿ: ಐದು ವರ್ಷಗಳ ಹಿಂದೆ ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ನಡೆದಿದೆ ಎನ್ನಲಾದ ಅನುಮಾನಾಸ್ಪದ ಪ್ರಕರಣವೊಂದರಲ್ಲಿ ಟೀಂ ಇಂಡಿಯಾದ ಇಬ್ಬರು ಬ್ಯಾಟ್ಸ್‍ಮನ್‍ಗಳ ಪಾತ್ರವಿರುವುದನ್ನು ಪತ್ರಿಕೆಯೊಂದು ಬಹಿರಂಗಪಡಿಸಿದೆ.
2010ರಲ್ಲಿ ಏಷ್ಯಾಕಪ್ ಟೂರ್ನಿಗಾಗಿ ಲಂಕಾಗೆ ತೆರಳಿದ್ದ ಸಂದರ್ಭದಲ್ಲಿ, ಭಾರತ ತಂಡದ ಆಟಗಾರನೊಬ್ಬ ತಾನು ಉಳಿದು ಕೊಂಡಿದ್ದ ಹೋಟೆಲ್‍ನಲ್ಲಿ ಬುಕೀ ಜತೆಗೆ ಸಂಪರ್ಕ ಹೊಂದಿದ್ದ ಮಹಿಳೆಯೊಬ್ಬರೊಂದಿಗೆ ಮಾತುಕತೆ ನಡೆಸಿದ್ದಾಗಿ ಕೆಲ ಅನುಮಾನಾಸ್ಪದ ವರದಿಗಳು ಮಾಧ್ಯಮಗಳಲ್ಲಿ ಬಂದಿದ್ದರಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಇದರ ತನಿಖೆ ನಡೆಸಿತ್ತು.
ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆಗಿನ ಭದ್ರತಾ ಸಲಹೆಗಾರ ಮೇಜರ್ ಜನರಲ್ ಲಾರೆನ್ಸ್ ಫರ್ನಾಂಡೊ ಅವರು, ಆಗಿನ ಭಾರತೀಯ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿದ್ದ ರಂಜಿಬ್ ಬಿಸ್ವಾಲ್ ಅವರಿಗೆ ರಹಸ್ಯ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಮಹಿಳೆ ಭೇಟಿ ಪ್ರಕರಣದಲ್ಲಿ ಟೀಂ ಇಂಡಿಯಾದ ಕೇವಲ ಒಬ್ಬ ಆಟಗಾರನಲ್ಲದೆ, ಮತ್ತೊಬ್ಬ ಆಟಗಾರನೂ ಭಾಗಿಯಾಗಿದ್ದಾಗಿ ತಿಳಿಸಿದ್ದರು. ಇದೀಗ, ಈ ಪತ್ರದ ಪ್ರತಿಯನ್ನು ಪ್ರಕಟಗೊಳಿಸಿರುವ 'ಡೈಲಿ ಮೇಲ್', 2000ರ ಜೂನ್ 18ರಂದು ನಡೆದಿದ್ದ ಆ ಪ್ರಕರಣದ ಮತ್ತೊಂದು ಸತ್ಯವನ್ನು ಅನಾವರಣಗೊಳಿಸಿದೆ ಎಂದು ಯಾಹೂ ಕ್ರಿಕೆಟ್ ವರದಿ ಮಾಡಿದೆ.