ಬೆಂಗಳೂರು: ಹ್ಯಾಟ್ರಿಕ್ ಪ್ರಶಸ್ತಿಯನ್ನು ಬಾಚಿಕೊಳ್ಳುವ ನಿಟ್ಟಿನಲ್ಲಿ ತನ್ನ ಹೋರಾಟ ಆರಂಭಿಸಿರುವ ಹಾಲಿ ಚಾಂಪಿಯನ್ ಸಬೀನಾ ಅಥಿಕಾ 26ನೇ ರಾಷ್ಟ್ರೀಯ ಟೆನ್‍ಪಿನ್ ಬೌಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಶುಭಾರಂಭ ಮಾಡಿದ್ದಾರೆ.
ಚಾಂಪಿಯನ್‍ಶಿಪ್‍ನ ಮೂರನೇ ದಿನವಾದ ಗುರುವಾರ ಬೆಂಗಳೂರಿನ ಬ್ಲೂ ಆವರಣದಲ್ಲಿ ನಡೆದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಸಬೀನಾ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಗೇಮ್ನಲ್ಲಿ 236 ಅಂಕಗಳ ಭರ್ಜರಿ ಆರಂಭ ಪಡೆದ ಸಬೀನಾ, ನಂತರದ ಗೇಮ್ಗಳಲ್ಲಿ ಇದೇ ಲಯವನ್ನು ಮುಂದುವರಿಸದಿದ್ದರೂ, ಇತರೆ ಸ್ಪರ್ಧಿಗಳಿಗಿಂತಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಹಂತದ ಸ್ಪರ್ಧೆಯಲ್ಲಿ 6 ಗೇಮ್ ಗಳಿಂದ ಸಬೀನಾ, 187.83 ಸರಾಸರಿಯಲ್ಲಿ 1127 ಅಂಕಗಳನ್ನು ಸಂಪಾದಿಸಿದ್ದಾರೆ. ಇನ್ನು ದೆಹಲಿಯ ಅನುರಾಧಾ ಸ್ರದಾ 171.83 ಸರಾಸರಿಯಲ್ಲಿ 171.83 ಅಂಕಗಳ ಅಂತರದಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಆ ಮೂಲಕ ಸಬೀನಾ 96 ಅಂಕಗಳ ಅತ್ಯುತ್ತಮ ಮುನ್ನಡೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಮಹಾರಾಷ್ಟ್ರದ ಕಾಶ್ಮಿರಾ 1021 ಅಂಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ. ಇನ್ನು ಕರ್ನಾಟಕದ ಸ್ಪರ್ಧಿಗಳ ಪೈಕಿ ರಾಜ್ಯ ಚಾಂಪಿಯನ್ ಜೂಡಿ ಅಲ್ಬನ್ 1009 ಅಂಕಗಳೊಂದಿಗೆ 5ನೇ ಸ್ಥಾನ, ಶ್ವೇತಾ ಅರಸ್ 1006 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.
ಮುಂದುವರಿದ ಶಬ್ಬೀರ್ ಪ್ರಾಬಲ್ಯ: ಪುರುಷರ ವಿಭಾಗದ ಮೊದಲ ಸುತ್ತಿನ ಅಂತಿಮ ಹಂತದ ಮುಕ್ತಾಯಕ್ಕೆ ಮಾಜಿ ಚಾಂಪಿಯನ್ ಶಬ್ಬೀರ್ ಧನ್‍ಕೋಟ್, 48 ಸ್ಪರ್ಧಿಗಳ ಪೈಕಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಮೊದಲ ಸುತ್ತಿನ 12 ಗೇಮ್ಗಳಿಂದ 210.75ರ ಸರಾಸರಿಯಲ್ಲಿ 2529 ಅಂಕಗಳನ್ನು ಪಡೆದ ಶಬ್ಬೀರ್ ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ. ಇನ್ನು ಕರ್ನಾಟಕದ ಭರವಸೆಯ ಆಟಗಾರ ಆಕಾಶ್ ಅಶೋಕ್ ಕುಮಾರ್ (2483) 206.92ರ ಸರಾಸರಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಆ ಮೂಲಕ ಶಬ್ಬೀರ್ 46 ಅಂಕಗಳ ಅಂತರದಲ್ಲಿ ಅಗ್ರಸ್ಥಾನದ ಮುನ್ನಡೆ ಸಾಧಿಸಿದ್ದಾರೆ. ಇನ್ನು ಹಾಲಿ ಚಾಂಪಿಯನ್ ದೆಹಲಿಯ ಧ್ರುವ ಸರ್ದಾ 205.33ರ ಸರಾಸರಿ 2464 ಅಂಕಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ.