ಕ್ರೀಡೆ

ಸೆಮೀಸ್‍ಗೆ ಭಾರತ ಲಗ್ಗೆ

Srinivasamurthy VN

ರಾಯ್ಪುರ: ಪಂದ್ಯದ ಎರಡೂ ಅವಧಿಯಲ್ಲಿ ತಲಾ ಗೋಲು ದಾಖಲಿಸುವ  ಮೂಲಕ ಪ್ರಬಲ ಬ್ರಿಟನ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಆತಿಥೇಯ ಭಾರತ ಹಾಕಿ ತಂಡ ವಿಶ್ವ ಹಾಕಿ ಲೀಗ್ ಫೈನಲ್ಸ್ ಟೂರ್ನಿಯ ಉಪಾಂತ್ಯಕ್ಕೆ ಲಗ್ಗೆ ಹಾಕಿದೆ.

ಗುರುವಾರ ಇಲ್ಲಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ತೀವ್ರ ಹಣಾಹಣಿಯ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸರ್ದಾರ್ ಸಿಂಗ್ ನೇತೃತ್ವದ ಭಾರತ ತಂಡ 2-1  ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಆ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು. ಭಾರತ ತಂಡದ ಪರ ಕರ್ನಾಟಕದ ವಿ.ಆರ್.ರಘುನಾಥ್ 19ನೇ ಮತ್ತು ತಲ್ವಿಂದರ್ 39ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ಬ್ರಿಟನ್ ಪರ ಸಿಮೊನ್ ಮಾಂಟೆಲ್ 52ನೇ ನಿಮಿಷದಲ್ಲಿ ಏಕೈಕ ಗೋಲು ಹೊಡೆದರು.

ಟೂರ್ನಿಯ ಆರಂಭದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ರೊಯ್ಲೆಂಟ್ ಒಲ್ಟ್‍ಮನ್ಸ್ ಮಾರ್ಗದರ್ಶನದ ಭಾರತ ತಂಡಕ್ಕೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ  ಎಂಬಂತಾಗಿತ್ತು. ಒತ್ತಡದಿಂದಲೇ ಕಣಕ್ಕಿಳಿದಿತ್ತಾದರೂ ಮೈದಾನದಲ್ಲಿ ಆಟಗಾರರು ತೋರಿದ ಜಾಣ್ಮೆ ಹಾಗೂ ಸಂಘಟಿತ ಪ್ರದರ್ಶನ, ಆಂಗ್ಲರಿಗೆ ಪ್ರಬಲ ಸವಾಲಾಗಿ ಪರಿಣಮಿಸಿತು.  ಶುರುವಿನಿಂದಲೇ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ ಸರ್ದಾರ್ ಪಡೆ, ಅತ್ಯುತ್ತಮ ಪಾಸ್‍ಗಳೊಂದಿಗೆ ಬ್ರಿಟನ್ ಆಟಗಾರರ ದಿಕ್ಕು ತಪ್ಪಿಸಿದರು. ಪಂದ್ಯದ 19ನೇ ನಿಮಿಷದಲ್ಲಿ  ಭಾರತ ತಂಡದ ಅಮೀರ್ ಖಾನ್ ಪೆನಾಲ್ಟಿ ಅವಕಾಶವನ್ನು ಸೃಷ್ಠಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಕಾರ್ನರ್‍ನಿಂದ ನಾಯಕ ಸರ್ದಾರ್ ಸಿಂಗ್ ಚೆಂಡನ್ನು ಪಾಸ್ ಮಾಡಿದರು.

ಈ ಅವಕಾಶವನ್ನು ಮಿಸ್ ಮಾಡದ ರಘುನಾಥ್ ಭಾರತಕ್ಕೆ ಮೊದಲ ಯಶ ತಂದುಕೊಟ್ಟರು. ಆ ಮೂಲಕ ಭಾರತ ಪಂದ್ಯದ ಮೊದಲಾರ್ಧ ಮುಕ್ತಾಯಕ್ಕೆ 1-0 ಮುನ್ನಡೆ ಸಾಧಿಸಿತು. ಇನ್ನು  ದ್ವಿತೀಯಾರ್ಧದ ಆರಂಭದಲ್ಲಿ ಮತ್ತೆ ಮಿಂಚಿನ ದಾಳಿ ನಡೆಸಿದ ಭಾರತ ತಂಡದ ಆಟಗಾರರು ಮತ್ತೊಂದು ಗೋಲು ದಾಖಲಿಸಿ ಬ್ರಿಟನ್ ಮೇಲೆ ಒತ್ತಡ ಹೇರಿದರು. 39ನೇ ನಿಮಿಷದಲ್ಲಿ  ಚಿಂಗ್ಲೆನ್ಸಾನಾ ಅವರು ನೀಡಿದ ದೊಡ್ಡ ಪಾಸ್ ಅನ್ನು ತಲ್ವಿಂದರ್ ಸಿಂಗ್ ಗೋಲಾಗಿಸಿದ್ದು ಬ್ರಿಟನ್ ರಕ್ಷಣಾತ್ಮಕ ವಿಭಾಗದ ಲೋಪಕ್ಕೆ ಸಾಕ್ಷಿಯಾಯಿತು. ಏಕಾಂಗಿಯಾಗಿ ಬ್ರಿಟನ್‍ನ ಬಾಕ್ಸ್ ನೊಳಗೆ  ಪ್ರವೇಶಿಸಿದ ತಲ್ವಿಂದರ್, ಗೋಲ್ ಕೀಪರ್ ಅವರನ್ನು ಹಿಂದಿಕ್ಕಿ ಆಕರ್ಷಕ ಗೋಲು ದಾಖಲಿಸಿದರು. ಆಗ ಭಾರತದ ಪಾಳಯದಲ್ಲಿನ ಸಂಭ್ರಮ ಮುಗಿಲು ಮಟ್ಟುವಂತಿತ್ತು.

SCROLL FOR NEXT