ಬೆಂಗಳೂರು: ರಾಜ್ಯದ ಯುವ ಬ್ಯಾಡ್ಮಿಂಟನ್ ಪ್ರತಿಭೆಗಳಾದ ಭಾರ್ಗವ್ ಎಸ್ ಗೌಡ ಮತ್ತು ಎಚ್.ವಿ ನಿತಿನ್ ಎಎಸ್‍ಎ ರಾಜ್ಯ ರ್ಯಾಂಕಿಂಗ್ ಸಬ್ ಜೂನಿಯರ್ ಟೂರ್ನಿಯ 15 ವರ್ಷದೊಳಗಿನವರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಸೋಮವಾರ ನಡೆದ ಬಾಲಕರ ಸೆಮಿಫೈನಲ್ ಪಂದ್ಯದಲ್ಲಿ ಭಾರ್ಗವ್ ತಮ್ಮ ಪ್ರತಿಸ್ಪರ್ಧಿ ಅಭಿಮಾನ್ ವಿರುದ್ಧ 21-15, 21-13 ಗೇಮ್ ಗಳ ಅಂತರದಲ್ಲಿ ಮಣಿಸಿದರು. ಮತ್ತೊಂದು ಉಪಾಂತ್ಯ ಪಂದ್ಯದಲ್ಲಿ ನಿತಿನ್ ತಮ್ಮ ಪ್ರತಿಸ್ಪರ್ಧಿ ಸನೀತ್ ಡಿ ದಯಾನಂದ್ ವಿರುದ್ಧ 21-19, 21-17 ಗೇಮ್ ಗಳ ಅಂತರದಲ್ಲಿ ಜಯಿಸಿದರು. ಇನ್ನು ಬಾಲಕರ ಡಬಲ್ಸ್ ನಲ್ಲಿ ಭಾರ್ಗವ್ ಮತ್ತು ನಿತಿನ್ ಜತೆಯಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದು, ಅಜಿಂಕ್ಯ ಜೋಷಿ ಮತ್ತು ಸಿ.ಎಸ್. ಸಾಕೇತ್ ಜೋಡಿಯನ್ನು ಎದುರಿಸಲಿದೆ. ಅಂತೆಯೇ 13 ವರ್ಷದೊಳಗಿನ ಬಾಲಕರ ಸೆಮಿಫೈನಲ್ ಪಂದ್ಯದಲ್ಲಿ ಚಿರಂಜೀವಿ ರೆಡ್ಡಿ 21-19, 21-17 ಗೇಮ್ ಗಳಿಂದ ವಿ. ಸುಹಾಸ್ ವಿರುದ್ಧ ಜಯಿಸಿದರು.