ನವದೆಹಲಿ: ಇಂಟರ್‍ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ಇಂದಿನಿಂದ ದೆಹಲಿಗೆ ಕಾಲಿಟ್ಟಿದೆ.
ಹಾಲಿ ಚಾಂಪಿಯನ್ ಆತಿಥೇಯ ಇಂಡಿಯನ್ ಏಸಸ್ ತಂಡದ ರಾಫೆಲ್ ನಡಾಲ್ ಹಾಗೂ ಯುಎಇ ರಾಯಲ್ಸ್‍ನ ರೋಜರ್ ಫೆಡರರ್ ನಡುವಣ ಕಾದಾಟ ಎಲ್ಲರ ಕೇಂದ್ರಬಿಂದುವಾಗಿದೆ. ಗುರುವಾರ ನವದೆಹಲಿಯ ಹಂತದ ಪಂದ್ಯಗಳು ಆರಂಭವಾಗಲಿದ್ದು, ದಿನದ ಎರಡನೇ ಪಂದ್ಯದಲ್ಲಿ ಇಂಡಿಯನ್ ಏಸಸ್ ತಂಡ ಫಿಲಿಪ್ಪೀನ್ಸ್ ಮಾವರಿಕ್ಸ್ ವಿರುದ್ಧ ಸೆಣಸಲಿದೆ. ಡಿ.12ರಂದು ಯುಎಇ ರಾಯಲ್ಸ್ ವಿರುದ್ಧ ಸೆಣಸಲಿದ್ದು, ನಡಾಲ್ ಮತ್ತು ಫೆಡರರ್ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಭಾರತ ಟೆನಿಸ್‍ನ ಡಬಲ್ಸ್ ವಿಭಾಗದ ತಾರೆ ಮಹೇಶ್ ಭೂಪತಿ ಅವರ ಕನಸಿನ ಕೂಸಾಗಿರುವ ಈ ಐಪಿಟಿಎಲ್ ಟೂರ್ನಿ ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಈಗ ಭಾರತದ ಹಂತದ ಟೂರ್ನಿ ದೇಶದ ಟೆನಿಸ್ ಅಭಿಮಾನಿಗಳ ಗಮನ ಸೆಳೆದಿದೆ.
ಇಂಡಿಯನ್ ಏಸಸ್ ತಂಡದಲ್ಲಿ ನಡಾಲ್ ಜತೆಗೆ ಭಾರತದ ತಾರೆಯರಾದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಇದ್ದು, ದೆಹಲಿ ಟೆನಿಸ್ ಪ್ರೇಮಿಗಳ ಹೃದಯ ಮಿಡಿತ ಹೆಚ್ಚಿಸಿದ್ದಾರೆ. ಇನ್ನು ಟೆನಿಸ್ ದಂತಕತೆ ಲಿಯಾಂಡರ್ ಪೇಸ್ ಜಪಾನ್ ವಾರಿಯರ್ಸ್ ಪರ ಆಡುತ್ತಿರುವುದು ವಿಶೇಷ. ಏತನ್ಮಧ್ಯೆ ಸಿಂಗಪುರ ಸ್ಲಾಮರ್ಸ್ ತಂಡದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಚ್ ಟೂರ್ನಿಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಭಾರತದ ಅಭಿಮಾನಿಗಳು ಸರ್ಬಿಯಾ ಆಟಗಾರನ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಉಳಿದಂತೆ ಆ್ಯಂಡಿ ಮರ್ರೆ, ಸ್ಟಾನಿಸ್ಲಾಸ್ ವಾವ್ರಿಂಕಾರಂತಹ ತಾರೆಯರು ಸಹ ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವುದು ಅಭಿಮಾನಿಗಳ ಕುತೂಹಲ ಕೆರಳಿಸಿದೆ.
ವಿಶ್ವದ ತಾರಾ ಆಟಗಾರರು ಈ ಲೀಗ್‍ಗಾಗಿ ಭಾರತಕ್ಕೆ ಆಗಮಿಸಿರುವುದು ಟೂರ್ನಿ ಕಳೆ ಹೆಚ್ಚಿಸಿದೆ. ಕಳೆದ ವರ್ಷ ಟಿಕೆಟ್ ದುಬಾರಿಯಾಗಿದ್ದರಿಂದ 15 ಸಾವಿರ ಸಾಮರ್ಥ್ಯದ ಐಜಿ ಕ್ರೀಡಾಂಗಣ ಅರ್ಧದಷ್ಟು ಮಾತ್ರ ತುಂಬಿದ್ದವು. ಈ ಬಾರಿಯೂ ರು.4 ಸಾವಿರದಿಂದ ಟಿಕೆಟ್ ಬೆಲೆ ಆರಂಭವಾಗಲಿದ್ದು, ಅಭಿಮಾನಿಗಳು ಎಷ್ಟರ ಪ್ರಮಾಣದಲ್ಲಿ ಆಗಮಿಸುವರು ಎಂಬುದನನ್ನು ಕಾದು ನೋಡಬೇಕು.
ಕೋಚ್ ಬದಲಿಸಿದ ರೋಜರ್ ಫೆಡರರ್
ಏತನ್ಮಧ್ಯೆ ವಿಶ್ವದ ಮೂರನೇ ರ್ಯಾಂಕಿಂಗ್‍ನ ಸ್ವಿಜರ್ಲೆಂಡ್ ಆಟಗಾರ ರೋಜರ್ ಫೆಡರರ್ ತಮ್ಮ ಕೋಚ್ ಸ್ಟೀಫನ್ ಎಡ್‍ಬರ್ಗ್ ಅವರೊಂದಿಗಿನ ಒಪ್ಪಂದವನ್ನು ಅಂತ್ಯಗೊಳಿಸಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಫೆಡರರ್ ಕ್ರೊವೇಶಿಯಾದ ಇವಾನ್ ಜುಬಿಸಿಕ್ ಅವರಿಂದ ಮಾರ್ಗದರ್ಶನ ಪಡೆಯಲಿದ್ದಾರೆ. ಈ ಕುರಿತು ಮಂಗಳವಾರ ತಮ್ಮ ವೆಬ್‍ಸೈಟ್‍ನಲ್ಲಿ ಮಾಹಿತಿ ನೀಡಿರುವ ಫೆಡರರ್, ತನ್ನ ಬಾಲ್ಯದ ಸೂ#ರ್ತಿ ಎಡ್‍ಬರ್ಗ್ ಅವರು 2014ರಲ್ಲಿ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದರು. ಆ ಮೂಲಕ ಬಹುದಿನಗಳ ಕನಸು ನನಸಾಗಿತ್ತು. ಇದೀಗ ಒಪ್ಪಂದ ಮುಕ್ತಾಯವಾದ ನಂತರವೂ ಅವರು ನಮ್ಮ ತಂಡದೊಂದಿಗಿರುತ್ತಾರೆ ಎಂದು ತಿಳಿಸಿದ್ದಾರೆ