ಕ್ರೀಡೆ

ಭಾರತ-ಪಾಕ್ ಕ್ರಿಕೆಟ್ ಸರಣಿ ನಡೆಯುವ ಸಾಧ್ಯತೆ ಕ್ಷೀಣ: ಪಿಸಿಬಿ

Srinivas Rao BV

ಇಸ್ಲಾಮಾಬಾದ್: ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದ್ವಿಪಕ್ಷೀಯ ಮಾತುಕತೆ ವೇಳೆ ಭಾರತ- ಪಾಕಿಸ್ತಾನ ಕ್ರಿಕೆಟ್ ಸರಣಿ ಪುನಾರಂಭಿಸುವ ಬಗ್ಗೆ ಚರ್ಚಿಸಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಹೇಳಿದ್ದಾರೆ.
ಕ್ರಿಕೆಟ್ ಸರಣಿ ಪುನಾರಂಭ ಮಾಡುವುದಕ್ಕೆ ಸುಷ್ಮಾ ಸ್ವರಾಜ್ ಒಪ್ಪಿಗೆ ನೀಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ ಎಂದು ಶರ್ಯಾರ್ ಖಾನ್ ತಿಳಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ನಿಯಮಿತ ಓವರ್ ಗಳ ಮೂರು ಏಕದಿನ ಪಂದ್ಯ ಹಾಗೂ ಟಿ 20 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಪಿಸಿಬಿ ತೀರ್ಮಾನಿಸಿತ್ತು. ಆದರೆ ಇದಕ್ಕೆ ಭಾರತ ಸರ್ಕಾರದ ಅನುಮೋದನೆ ಬೇಕಿದೆ. ಈ ವರೆಗೂ ಸರಣಿ ನಡೆಸುವುದಕ್ಕೆ ಭಾರತ ಸರ್ಕಾರ ಅನುಮೋದನೆ ನೀಡಿಲ್ಲ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭೇಟಿ ವೇಳೆ ಕ್ರಿಕೆಟ್ ಸರಣಿ ನಡೆಸುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿ ಅಂತಿಮ ತಿರ್ಮಾನಕ್ಕೆ ಬರಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ನವಾಜ್ ಷರೀಫ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ವೇಳೆ ಸುಷ್ಮಾ ಸ್ವರಾಜ್ ಕ್ರಿಕೆಟ್ ವಿಷಯವನ್ನು ಪ್ರಸ್ತಾಪಿಸಿಲ್ಲ. ಇದರಿಂದಾಗಿ ಸರಣಿ ನಡೆಯುವುದು ಅನುಮಾನವಾಗಿದ್ದು 50 ಮಿಲಿಯನ್ ನಷ್ಟ ಉಂಟಾಗಲಿದೆ ಎಂದು ಶಹರ್ಯಾರ್ ಖಾನ್ ತಿಳಿಸಿದ್ದಾರೆ.
ಡಿ.17 - ಜನವರಿ 3 ವರೆಗೆ ಕ್ರಿಕೆಟ್ ಸರಣಿ ನಿಗದಿಯಾಗಿದ್ದು ಭಾರತ ಸರ್ಕಾರ ಕೊನೆ ಕ್ಷಣದಲ್ಲಿ ಅನುಮೋದನೆ ನೀಡಿದರೆ ಸರಣಿ ಆಯೋಜಿಸುವುದು ಸವಾಲಿನ ಕೆಲಸವಾಗಲಿದೆ ಆದರೂ ಸಹ ಸರಣಿ ನಡೆಸಲು ಸಿದ್ಧ ಎಂದು ಪಿಸಿಬಿ ತಿಳಿಸಿದೆ.

SCROLL FOR NEXT