ನವದೆಹಲಿ: ಭಾರೀ ನಿರೀಕ್ಷೆಯ ಚೊಚ್ಚಲ ಆವೃತ್ತಿಯ ಪ್ರೊ. ರೆಸ್ಲಿಂಗ್ ಲೀಗ್ ಪಂದ್ಯಾವಳಿ ಬುಧವಾರದಿಂದ ಆರಂಭವಾಗಲಿದ್ದು, ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಗಾಲಯಥಾನ್ ಯೂನಿವರ್ಸಿಟಿ ದಿಲ್ಲಿ ವೀರ್ ತಂಡ ಹಾಗೂ ಪಂಜಾಬ್ ರಾಯಲ್ಸ್ ಪರಸ್ಪರ ಸೆಣಸಲಿವೆ.
ಈ ಪಂದ್ಯವು ಕೆ.ಡಿ. ಜಾಧವ್ ಕುಸ್ತಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಡಿ. 10ರಿಂದ ಆರಂಭಗೊಳ್ಳುವ ಈ ಟೂರ್ನಿಯು, ಮೂರು ವಾರಗಳ ಕಾಲ ನಡೆಯಲಿದ್ದು, ಡಿ. 27ರಂದು ಅಂತ್ಯಗೊಳ್ಳಲಿದೆ.
ಶನಿವಾರದಿಂದ ಯೋಧಾಸ್ ಅಭಿಯಾನ: ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ರಾಜ್ಯದ ಬೆಂಗಳೂರು ಯೋಧಾಸ್ ತನ್ನ ಅಭಿಯಾನವನ್ನು ಡಿ. 12ರಿಂದ ಆರಂಭಿಸಲಿದ್ದು, ಮೊದಲ ಹಣಾಹಣಿಯಲ್ಲಿ ಹರ್ಯಾಣ ಹ್ಯಾಮರ್ಸ್ ವಿರುದ್ಧ ಸೆಣಸಲಿದೆ. ತಂಡದಲ್ಲಿರುವ ಭಾರತೀಯ ಕುಸ್ತಿಪಟುಗಳು ಸೋನಪೇಟ್ ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದಲ್ಲಿ 10 ದಿನಗಳ ತರಬೇತಿ ಪಡೆದಿದ್ದಾರೆ. ಇದಲ್ಲದೆ, ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್‍ನಲ್ಲಿ ಅನುಭವ ಪಡೆದಿರುವ ತಂಡದ ಕ್ರೀಡಾಳುಗಳು ಚೊಚ್ಚಲ ಆವೃತ್ತಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆಂದು ತಂಡದ ಕೋಚ್ ಕುಲ್ದೀಪ್ ಮಲಿಕ್ ಆಶಿಸಿದ್ದಾರೆ.
ಇದೇ ವರ್ಷದ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕದ ಸಾಧನೆ ಮಾಡಿರುವ ನರಸಿಂಗ್ ಯಾದವ್ (74 ಕೆಜಿ), ಯೋಧಾಸ್‍ನ ನಾಯಕತ್ವ ವಹಿಸಿರುವುದರಿಂದ ತಂಡವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಲಿದ್ದಾರೆಂಬುದು ಮಲಿಕ್ ಆಶಯ. ಇನ್ನುಳಿದಂತೆ, ಪುರುಷರ ಆಟಗಾರರಲ್ಲಿ 2013ರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾರತಕ್ಕೆ ಕಂಚು ತಂದಿದ್ದ ಭಜರಂಗ್ ಪೂನಿಯಾ (65 ಕೆಜಿ) ಹಾಗೂ ಸಂದೀಪ್ ತೋಮರ್ ಅವರೂ ಪ್ರಮುಖರೆನಿಸಿದ್ದಾರೆ. ಇನ್ನು, ಯೋಧಾಸ್ ಪಡೆಯ ಮಹಿಳೆಯರ ವಿಭಾಗದಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ಪದಕ ವಿಜೇತೆ, ಅಜರ್‍ಬೈಜಾನ್‍ನ ಯುಲಿಯಾ ರಾಟ್ಕೇವಿಚ್ (58 ಕೆಜಿ), ಅಮೆರಿಕದ ಅಲೈಸ್ಸಾ ಲಾಂಪೆ (48 ಕೆಜಿ) ಇದ್ದಾರೆ.