ದುಬೈ: ಪ್ರತಿಷ್ಠಿತ ಬಿಡಬ್ಲ್ಯೂಎಫ್ ಸೂಪರ್ ಸೀರೀಸ್ ಫೆೈನಲ್ಸ್ ನಲ್ಲಿ ಭಾರತ ಎರಡನೇ ದಿನ ಮಿಶ್ರಫಲ ಅನುಭವಿಸಿತು.
ಗುರುವಾರ ಹಂದನ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ `ಬಿ' ಗುಂಪಿನ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಶ್ರೀಕಾಂತ್ ತಮ್ಮ ಪ್ರತಿಸ್ಪರ್ಧಿ ಡೆನ್ಮಾಕ್ರ್ ನ ವಿಕ್ಟರ್ ಅಕ್ಸೆಲ್‍ಸೆನ್ ವಿರುದ್ಧ 13 -21, 18-21 ಗೇಮ್ ಗಳ ಅಂತರದಲ್ಲಿ ಪರಾಭವಗೊಂಡರೆ, ಬಳಿಕ ನಡೆದ ಮಹಿಳೆಯರ ಎ ಗುಂಪಿನ ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್, ಜಗತ್ತಿನ ನಂಬರ್ ಒನ್ ಆಟಗಾರ್ತಿ ಸ್ಪೇನ್‍ನ ಕ್ಯಾರೊಲಿನ್ ಮರಿನ್ ವಿರುದ್ಧ ಅಮೋಘ ಆಟವಾಡಿ 21-23, 9-21, 21-12 ಗೇಮ್ ಗಳ ಅಂತರದ ಜಯ ಸಾಧಿಸಿದರು. ಆಲ್ ಇಂಗ್ಲೆಂಡ್ ಮತ್ತು ವಿಶ್ವ ಚಾಂಪಿಯನ್‍ಶಿಪ್ ಬ್ಯಾಡ್ಮಿಂಟನ್ ಟೂರ್ನಿಯ ಫೆೈನಲ್ ಪಂದ್ಯದಲ್ಲಿ ಮರಿನ್ ವಿರುದ್ಧ ಸೋತಿದ್ದ ಸೈನಾ, ಸೇಡು ತೀರಿಸಿಕೊಂಡಿದ್ದಾರೆ.
ಆ ಮೂಲಕ ಸೈನಾ ಟೂರ್ನಿಯಲ್ಲಿ ಸೆಮಿಫೆೈನಲ್ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದ್ದಾರೆ. ಶ್ರೀಕಾಂತ್ `ಬಿ' ಗುಂಪಿನ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ಚೈನೀಸ್ ತೈಪೇನ ಚೌ ತೈನ್ ಚೆನ್ ವಿರುದ್ಧ ಸೆಣಸಲಿದ್ದು, ಈ ಪಂದ್ಯ ಅವರಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಇದೇ ವರ್ಷ ಸ್ವಿಸ್ ಓಪನ್ ಮತ್ತು ಇಂಡಿಯಾ ಓಪನ್ ಟೂರ್ನಿಯಲ್ಲಿ ಶ್ರೀಕಾಂತ್, ವಿಕ್ಟರ್ ವಿರುದ್ಧ ಜಯಿಸಿದ್ದರು. ಆದರೆ, 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಕ್ಟರ್‍ರ ಆಕ್ರಮಣಕಾರಿ ಆಟವನ್ನು ಸಮರ್ಥವಾಗಿ ಎದುರಿಸಲು ಸಂಪೂರ್ಣವಾಗಿ ವಿಫಲರಾದರು.