ಏಷ್ಯಾಕಪ್ ರ‌್ಯಾಲಿ 4ನೇ ಹಾಗೂ ಅಂತಿಮ ಸುತ್ತಿನಲ್ಲಿ ಮೈಸೂರಿನ ಲೋಹಿತ್ ಅರಸ್-ಶ್ರೀಕಂಠಗೌಡ ಹಾಗೂ ಐಎನ್‌ಆರ್‌ಸಿಯಲ್ಲಿ ಹಾಲಿ ಚಾಂಪಿಯನ್ ದಿಲ್ಲಿಯ ಗೌರವ್ ಗಿಲ್-ಮೂಸಾ ಷರೀಫ್ ಜೋಡಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.
ಇಲ್ಲಿನ ಕಡೂರಿನ ಕುವೆಂಪು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆವರಣದಲ್ಲಿ ಭಾನುವಾರ ಅಂತ್ಯಗೊಂಡ ರ‌್ಯಾಲಿಯಲ್ಲಿ ಎಫ್‌ಐಎ ಏಷ್ಯಾಕಪ್ ಅಂತಿಮ ಸುತ್ತಿನ ಚಾಂಪಿಯನ್ ಜತೆಗೆ 2015ನೇ ಋತುವಿನ ಐಎನ್‌ಆರ್‌ಸಿ ರ‌್ಯಾಲಿ ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಲೋಹಿತ್ ಅರಸ್ ಮತ್ತು ಶ್ರೀಕಂಠಗೌಡ ಜೋಡಿ ತಮ್ಮದಾಗಿಸಿಕೊಂಡರು.
ಕಳೆದ ವರ್ಷದ ಐಎನ್‌ಆರ್‌ಸಿ ಚಾಂಪಿಯನ್ ಗೌರವ್ ಗಿಲ್ ಮತ್ತು ಸಹ ಚಾಲಕ ಮೂಸಾ ಷರೀಫ್, 2 ಗಂಟೆ 6ನಿಮಿಷ 18.6 ಸೆಕೆಂಡ್‌ಗಳಲ್ಲಿ ರ‌್ಯಾಲಿಯನ್ನು ಪೂರ್ಣಗೊಳಿಸಿ ಐಎನ್‌ಆರ್‌ಸಿ ಕಾಫಿ ಡೇ ರ‌್ಯಾಲಿಯ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡರು.
ಪ್ರಥಮ ಹಂತದಲ್ಲಿ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ್ದ ರ‌್ಯಾಲಿ ಪಟುಗಳು, ಭಾನುವಾರ ಬಯಲು ರಸ್ತೆಗಳಲ್ಲಿ ವೇಗಕ್ಕೆ ಒತ್ತು ನೀಡಿದರು. ಈ ವೇಳೆ ಸಹ ಕೆಲ ಕಾರ್‌ಗಳು ತಾಂತ್ರಿಕ ತೊಂದರೆ ಎದುರಿಸಿದವು. ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿ, ಕಮ್ಮರಗೋಡು, ಚಂದ್ರಾಪುರ ಎಸ್ಟೇಟ್‌ಗಳಲ್ಲಿ ಶನಿವಾರ ನಡೆದ ಲೆಗ್-1 ಸ್ಪರ್ಧೆಯಲ್ಲಿ ಕಾರಿನ ತಾಂತ್ರಿಕ ತೊಂದರೆಯಿಂದ ಗೌರವ್ ಗಿಲ್‌ಗಿಂತ ಲೋಹಿತ್ 1 ನಿಮಿಷ 23 ಸೆಕೆಂಡ್ ಹಿನ್ನಡೆ ಅನುಭವಿಸಿದ್ದರು. ಭಾನುವಾರ ಕಡೂರಿನ ಬಯಲು ಪ್ರದೇಶದ ವಿಸ್ತಾರವಾದ ರಸ್ತೆಯಲ್ಲಿ ಗರಿಷ್ಠ ವೇಗಕ್ಕೆ ಒತ್ತು ನೀಡಿದರೂ ಗಿಲ್ ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ.