ಕ್ರೀಡೆ

ಐಎಸ್‍ಎಲ್ ಫೈನಲ್ ಇಂದು

Srinivasamurthy VN

ಫಟೋರ್ಡಾ: ಚೊಚ್ಚಲ ಐಎಸ್‍ಎಲ್ ಆವೃತ್ತಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ಕ್ರಿಕೆಟ್‍ನ ದಂತಕತೆಗಳಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಸಹ ಮಾಲೀಕತ್ವದ ಅಟ್ಲೆಟಿಕೊ ಡಿ ಕೋಲ್ಕತಾ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈಗ ಅದೇ ಮಾದರಿಯಲ್ಲಿ ಟೀಂ ಇಂಡಿಯಾ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಮಾಲೀಕತ್ವದ ಚೆನ್ನೈಯಿನ್ ಎಫ್ ಸಿ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಎಫ್ ಸಿ ಗೋವಾ ತಂಡಗಳ ಸೆಣಸಾಟ ತೀವ್ರ ಕುತೂಹಲ ಮೂಡಿಸಿದೆ. ಭಾನುವಾರ ಇಲ್ಲಿನ ಜವಹಾರ್‍ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟವು ಫುಟ್ಬಾಲ್ ಪ್ರೇಮಿಗಳಲ್ಲಿ ಸಂಚಲನ ಸೃಷ್ಟಿಸಿದೆ. ಟೂರ್ನಿಯುದ್ದಕ್ಕೂ ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಅಂತಿಮ ಹಂತದವರೆಗೂ ಸಾಗಿ ಬಂದಿವೆ.

ಲೀಗ್ ಹಂತದಲ್ಲಿ ಎಫ್ ಸಿ ಗೋವಾ 25 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದರೆ, ಚೆನ್ನೈಯಿನ್ ಎಫ್ ಸಿ 23 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿತ್ತು. ನಂತರ ಎರಡು ಹಂತದ ಸೆಮಿಫೈನಲ್ ಪಂದ್ಯಗಳಲ್ಲಿ ಗೋವಾ ತಂಡ 3-1ರ ಗೋಲಿನ ಸರಾಸರಿಯಲ್ಲಿ ಡೆಲ್ಲಿ ಡೈನಮೋಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದರೆ, ಚೆನ್ನೈಯಿನ್ ಎಫ್ ಸಿ ತಂಡ ಹಾಲಿ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತಾ ತಂಡವನ್ನು 4-2ರಿಂದ ಮಣಿಸಿತ್ತು. ಒಟ್ಟಿನಲ್ಲಿ ಉಭಯ ತಂಡಗಳು ಬಹುತೇಕ ಸಮಬಲ ಹೊಂದಿದ್ದೂ, ಅಂತಿಮ ಪಂದ್ಯದಲ್ಲಿ ಯಾವ ತಂಡ ಒತ್ತಡವನ್ನು ಮೆಟ್ಟಿನಿಲ್ಲುತ್ತದೋ ಆ ತಂಡ ಪ್ರಶಸ್ತಿ ಪಡೆಯಲಿದೆ.

SCROLL FOR NEXT