ಬೆಂಗಳೂರು ಎಫ್ ಸಿ ವಿಜಯದ ಆರಂಭ
ಮೊದಲಾರ್ಧದಲ್ಲಿನ ಕಠಿಣ ಹೋರಾಟದಲ್ಲಿ ಯಾವುದೇ ಗೋಲು ದಾಖಲಾಗದೆ ಸಮಬಲದಲ್ಲಿ ಮುಕ್ತಾಯಕಂಡರೂ, ಪಂದ್ಯದ ದ್ವಿತೀಯಾರ್ಧದಲ್ಲಿ...
ಬೆಂಗಳೂರು: ಮೊದಲಾರ್ಧದಲ್ಲಿನ ಕಠಿಣ ಹೋರಾಟದಲ್ಲಿ ಯಾವುದೇ ಗೋಲು ದಾಖಲಾಗದೆ ಸಮಬಲದಲ್ಲಿ ಮುಕ್ತಾಯ ಕಂಡರೂ, ಪಂದ್ಯದ ದ್ವಿತೀಯಾರ್ಧದಲ್ಲಿ ಸಿ.ಕೆ.ವಿನೀತ್ ದಾಖಲಿಸಿದ ಆಕರ್ಷಕ ಗೋಲಿನ ನೆರವಿನೊಂದಿಗೆ ಬೆಂಗಳೂರು ಎಫ್ ಸಿ ತಂಡ ಡಿಎಫ್ಎ ಆಶ್ರಯದ ಸೂಪರ್ ಡಿವಿಷನ್ ಫುಟ್ಬಾಲ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಬುಧವಾರ ಬೆಂಗಳೂರು ಜಿಲ್ಲಾ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ 1-0 ಗೋಲಿನಿಂದ ಎಎಸ್‍ಸಿ ತಂಡವನ್ನು ಮಣಿಸಿತು. ಪಂದ್ಯದ 65ನೇ ನಿಮಿಷದಲ್ಲಿ ಸೆಮಿನ್ಲೆನ್ ದೌಂಗಲ್ ಚೆಂಡನ್ನು ಡಿ ಬಾಕ್ಸ್‍ಗೆ ನುಸುಳಿಸಿದರು. ಈ ವೇಳೆ ಜಾನ್‍ಜಾನ್ಸನ್ ಗೋಲಿನ ಅವಕಾಶ ಹೊಂದಿದ್ದರೂ, ಚೆಂಡನ್ನು ಸಿ.ಕೆ. ವಿನೀತ್‍ಗೆ ಬಿಟ್ಟುಕೊಟ್ಟರು.
ಅವಕಾಶವನ್ನು ಕೈಚೆಲ್ಲದ ವಿನೀತ್ ಚೆಂಡನ್ನು ಸುಲಭವಾಗಿ ಗೋಲುಪೆಟ್ಟಿಗೆಗೆ ಸೇರಿಸಿದರು. ವೇಳೆ ಆಟಗಾರರು ಮತ್ತು ಮೈದಾನದಲ್ಲಿದ್ದ ಪ್ರೇಕ್ಷಕರು ಆಫ್ ಸೈಡ್ ಫೌಲ್ ಎಂದು ಮನವಿ ಮಾಡಿದರು. ಈ ವೇಳೆ ಅಂಪೈರ್ ವಿಜಯ ಕುಮಾರ್ ಈ ಮನವಿಯನ್ನು ತಿರಸ್ಕರಿಸಿದರು. ಇನ್ನು ಬಿಎಫ್ ಸಿಯ ಡೇನಿಯಲ್ ಲಹಿಲಿಂಪುಯಾ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಲು ಎರಡೆರಡು ಬಾರಿ ಪ್ರಯತ್ನಿಸಿದರಾದರೂ, ಎಎಸ್‍ಸಿ ಗೋಲ್‍ಕೀಪರ್ ಎ.ಕೆ.ಬಲ್ವಂತ್ ಅದನ್ನು ತಡೆದರು.
ಪೋಸ್ಟಲ್‍ಗೆ ಜಯ: ಇನ್ನು ಇದಕ್ಕೂ ಮುನ್ನ ನಡೆದ `ಎ' ಡಿವಿಷನ್ ಲೀಗ್‍ನ ಪಂದ್ಯದಲ್ಲಿ ಪೋಸ್ಟಲ್ ತಂಡ ಯಂಗ್ ಚಾಲೆಂಜರ್ಸ್ ವಿರುದ್ಧ 2-0 ಗೋಲುಗಳ ಜಯ ಸಂಪಾದಿಸಿತು. ವಿಜೇತ ತಂಡದ ಪರ ವೆಸ್ಲಿ 19ನೇ ಹಾಗೂ ಸುಬ್ಬಾ 59ನೇ ನಿಮಿಷದಲ್ಲಿ ಗೋಲು ಬಾರಿಸಿದರು.