ಕ್ರೀಡೆ

ಪ್ರೋ ರೆಸ್ಲಿಂಗ್ ಲೀಗ್: ಗರುಡ ಚಾಂಪಿಯನ್

Vishwanath S

ತಿರುವನಂತಪುರ: ಪಂದ್ಯದ ಆರಂಭದಲ್ಲಿ ಹರ್ಯಾಣ ಹ್ಯಾಮರ್ಸ್ ತಂಡದಿಂದ ಪ್ರತಿರೋಧ ಎದುರಿಸಿದರೂ, ನಂತರ ತನ್ನ ಪ್ರಭುತ್ವ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಮುಂಬೈ ಗರುಡ ತಂಡ ಚೊಚ್ಚಲ ಪ್ರೋ ರೆಸ್ಲಿಂಗ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಂಬೈ ಗರುಡ ತಂಡ 7-2 ಅಂತರದಲ್ಲಿ ಹರ್ಯಾಣ ಹ್ಯಾಮರ್ಸ್ ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿ ಪಡೆಯಿತು. ಪುರುಷರ 65 ಕೆ.ಜಿ ವಿಭಾಗದಲ್ಲಿ ಮುಂಬೈ ಗರುಡ ತಂಡದ ಅಮಿತ್ ಧನಕರ್ ಆಕರ್ಷಕ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಂಟ್ಟರು. ಈ ಸೆಣಸಿನಲ್ಲಿ ಅಮಿತ್, ಹರ್ಯಾಣ ಹ್ಯಾಮರ್ಸ್‍ನ ವಿಶಾಲ್ ರಾಣಾ ಅವರನ್ನು 12-0 ಭಾರಿ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ನಂತರ ತಿರುಗಿ ಬಿದ್ದ ಹ್ಯಾಮರ್ಸ್ ಪಡೆ, ಮಹಿಳೆಯರ 58 ಕೆ.ಜಿ ವಿಭಾಗದಲ್ಲಿ ಗೆದ್ದು ಸಮಬಲ ಸಾಧಿಸಿತು. ಈ ಹಣಾಹಣಿಯಲ್ಲಿ ಹ್ಯಾಮರ್ಸ್‍ನ ಪ್ರಮುಖ ಆಟಗಾರ್ತಿ ಒಕ್ಸಾನಾ ಹರ್ಹೆಲ್, ಗರುಡ ತಂಡದ ಸಾಕ್ಷಿ ಮಲಿಕ್ ವಿರುದ್ಧ 4-4ರ ಸಮಬಲ ಸಾಧಿಸಿದರು. ಆ ನಂತರ ತಾಂತ್ರಿಕ ಕೌಶಲ್ಯದ ಆಧಾರದ ಮೇಲೆ ಒಕ್ಸಾನಾ ಮೇಲುಗೈ ಸಾಧಿಸಿದರು. ಪುರುಷರ 74 ಕೆ.ಜಿ ವಿಭಾಗದಲ್ಲಿ ಹರ್ಯಾಣ ಹ್ಯಾಮರ್ಸ್ ತಂಡದ ಲಿವೊನ್ ಲೊಪೆಜ್, ಮುಂಬೈ ಗರುಡ ತಂಡದ ಪ್ರದೀಪ್ ಅವರನ್ನು 11-6 ಅಂತರದಲ್ಲಿ ಮಣಿಸಿದರು. ಉತ್ತಮ ಆರಂಭದ ನಂತರ ದಿಢೀರನೆ ಕುಸಿತ ಕಂಡ ಮುಂಬೈ ಗರುಡ ತಂಡಕ್ಕೆ ನಾಯಕಿ ಅಡೆಲಿನ್ ಗ್ರೇಯ್ ಆಸರೆಯಾಗಿ ನಿಂತರು. ಮಹಿಳೆಯರ 69 ಕೆ.ಜಿ ವಿಭಾಗದ ಸೆಣಸಿನಲ್ಲಿ ಅಡೆಲಿನ್, ಹರ್ಯಾಣದ ಗೀತಿಕಾ ಜಾಖರ್ ಅವರನ್ನು 10-0 ಅಂತರದಲ್ಲಿ ಮಣಿಸಿದರು. ನಂತರ ಮುಂಬೈ ಗರುಡ ತಂಡದ ಗಿರ್ಗಿ ಸಕಂಡಲಿಡ್ಜ್ ಆಕರ್ಷಕ ಪ್ರದರ್ಶನದ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಹ್ಯಾಮರ್ಸ್‍ನ ಹಿತೇಂದರ್ ವಿರುದ್ಧ 10-0 ಭಾರಿ ಅಂತರದ ಮುನ್ನಡೆ ಪಡೆದ ಗಿರ್ಗಿ, ಮುಂಬೈ ಪಡೆ 3-2ರ ಮೇಲುಗೈ ಸಾಧಿಸುವಂತೆ ಮಾಡಿದರು. ಮಹಿಳೆಯರ 53 ಕೆ.ಜಿ ವಿಭಾಗದ ಪಂದ್ಯದಲ್ಲಿ ಮುಂಬೈನ ಗರುಡ ತಂಡದ ಒಡುನಯೊ 9-0 ಭಾರಿ ಅಂತರದಲ್ಲಿ ಹ್ಯಾಮರ್ಸ್‍ನ ನಾಯಕಿ ತತನ್ಯಾ ಕಿಟ್ ಅವರನ್ನು ಮಣಿಸಿದರು. ಪುರುಷರ 97 ಕೆ.ಜಿ ವಿಭಾಗದಲ್ಲಿ ಮುಂಬೈನ ಒಡಿಕಜೆ ಎಲಿಜ್ಬರ್ 6-4 ಅಂತರದಲ್ಲಿ ಹ್ಯಾಮರ್ಸ್‍ನ ವಾಲೆರಿ ವಿರುದ್ಧ ಜಯ ಸಾಧಿಸಿದರು. ಮಹಿಳೆಯರ 48 ಕೆ.ಜಿ ವಿಭಾಗದ ಪಂದ್ಯದಲ್ಲಿ ಗರುಡ ತಂಡದ ರೀತು ಫೊಗಟ್ 4-4 ಅಂತರದಲ್ಲಿ ಹ್ಯಾಮರ್ಸ್‍ನ ನಿರ್ಮಲ್ ದೇವಿ ವಿರುದ್ಧ ಸಮಬಲ ಸಾಧಿಸಿದರು. ಈ ವೇಳೆ ತಾಂತ್ರಿಕ ಅಂಶದ ಆಧಾರದ ಮೇಲೆ ರೀತು ಜಯಿಸಿದರು. ಪುರುಷರ 57 ಕೆ.ಜಿ ವಿಭಾಗದಲ್ಲಿ ಮುಂಬೈನ ರಾಹುಲ್ ಅವಾರೆ 6-3 ಅಂತರದಿಂದ ಹ್ಯಾಮರ್ಸ್‍ನ ನಿತಿನ್ ಅವರನ್ನು ಮಣಿಸಿದರು.

SCROLL FOR NEXT