ವಿಂಡೀಸ್ ತಂಡದ ಬ್ಯಾಟ್ಸ್‍ಮನ್ ರಾಜೇಂದ್ರ ಚಂದ್ರಿಕಾ ಅವರನ್ನು ಕಾಟ್ ಅಂಡ್ ಬೌಲ್ ಮಾಡುವ ಪ್ರಯತ್ನದಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯೋನ್
ಮೆಲ್ಬೋರ್ನ್: ಭಾರೀ ಸವಾಲಿನ ಗುರಿ ಎದುರಿಗಿದ್ದುದರಿಂದ ಸಹಜವಾಗಿಯೇ ಒತ್ತಡಕ್ಕೆ ಒಳಗಾದ ಪ್ರವಾಸಿ ವೆಸ್ಟ್ ಇಂಡೀಸ್, ಒಂದಷ್ಟು ಪ್ರತಿರೋಧದ ಮಧ್ಯೆಯೂ ಆತಿಥೇಯರ ಅಬ್ಬರದ ಆಟಕ್ಕೆ ತಲೆಬಾಗಿದ ಪರಿಣಾಮ ಮೆಲ್ಬೋರ್ನ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ 177 ರನ್ ಭರ್ಜರಿ ಗೆಲುವು ಸಾಧಿಸಿತು.
ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಮುಕ್ತಾಯ ಕಂಡ ಎರಡನೇ ಟೆಸ್ಟ್ ಪಂದ್ಯದ ಈ ಗೆಲುವಿನೊಂದಿಗೆ ಮೂರು ಪಂದ್ಯ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಾ, ಫ್ರಾಂಕ್ ವೊರೆಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಜನವರಿ 3ರಿಂದ ಸಿಡ್ನಿಯಲ್ಲಿ ಶುರುವಾಗಲಿದ್ದು, ಕೆರಿಬಿಯನ್ನರು ಕ್ಲೀನ್‍ಸ್ವೀಪ್ ಮುಖಭಂಗದಿಂದ ಪಾರಾಗಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಇನ್ನು ಪಂದ್ಯದ ನಾಲ್ಕನೇ ದಿನವಾದ ಮಂಗಳವಾರದಂದು ಗೆಲ್ಲಲು 460 ರನ್ ಗುರಿ ಪಡೆದ ಜೇಸನ್ ಹೋಲ್ಡರ್ ಸಾರಥ್ಯದ ವಿಂಡೀಸ್, ಬೃಹತ್ ಮೊತ್ತವನ್ನು ಭೇದಿಸಲಾಗದೆ ತನ್ನ ಎರಡನೇ ಇನ್ನಿಂಗ್ಸ್‍ನಲ್ಲಿ 88.3 ಓವರ್‍ಗಳಲ್ಲಿ 282 ರನ್‍ಗಳಿಗೆ ಆಲೌಟ್ ಆಯಿತು.
ಪಂದ್ಯದ ಮೂರನೇ ದಿನದಂದು ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಗೆ 179 ರನ್ ಮಾಡಿದ್ದ ಆಸ್ಟ್ರೇಲಿಯಾ, ನಿರೀಕ್ಷೆಯಂತೆಯೇ ಅಷ್ಟೇ ಮೊತ್ತಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಬಳಿಕ ಎರಡನೇ ಇನ್ನಿಂಗ್ಸ್ ಗೆ ಮುಂದಾದ ವೆಸ್ಟ್ ಇಂಡೀಸ್ ಅಸಾಧ್ಯ ಗುರಿಯನ್ನು ಬೆಂಬತ್ತಲು ಸಾಧ್ಯವಾಗಲಿಲ್ಲ. ಸ್ಪಿನ್ ಮಾಂತ್ರಿಕ ನಾಥನ್ ಲಿಯೋನ್ (85ಕ್ಕೆ 3) ಹಾಗೂ ಮಿಚೆಲ್ ಮಾರ್ಶ್ (61ಕ್ಕೆ 4) ಜತೆಗೆ ವೇಗಿ ಜೇಮ್ಸ್ ಪ್ಯಾಟಿನ್ ಸನ್ (45ಕ್ಕೆ 2) ಹಾಗೂ ಪೀಟರ್ ಸಿಡಲ್ 35ಕ್ಕೆ 1 ವಿಕೆಟ್ ಪಡೆದು ಕೆರಿಬಿಯನ್ನರ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ದಿನೇಶ್ ರಾಮ್ಡಿನ್ (59) ಮತ್ತು ನಾಯಕ ಜೇಸನ್ ಹೋಲ್ಡರ್ (68)6ನೇ ವಿಕೆಟ್ ಗೆ 100 ರನ್ ಗಳ ದಿಟ್ಟ ಜತೆಯಾಟ ನೀಡಿದ್ದು ಬಿಟ್ಟರೆ ವೆಸ್ಟ್ ಇಂಡೀಸ್ ನ ಮಿಕ್ಕ ಆಟಗಾರರು ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದರು.
ಎರಡೂ ಇನ್ನಿಂಗ್ಸ್ ನಲ್ಲಿ ಒಟ್ಟು 151 ರನ್ ಗಳಿಗೆ 7 ವಿಕೆಟ್ ಪಡೆದ ಸ್ಪಿನ್ನರ್ ನಾಥನ್ ಲಿಯೋನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪುರಸ್ಕೃತರಾದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 551/3 (ಡಿಕ್ಲೇರ್), ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್: 271, ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್: 179/3 (ಡಿಕ್ಲೇರ್), ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ 88.3 ಓವರ್‍ಗಳಲ್ಲಿ 282 (ದಿನೇಶ್ ರಾಮ್ದಿನ್ 59, ಜೇಸನ್ ಹೋಲ್ಡರ್ 68; ಮಿಚೆಲ್ ಮಾರ್ಶ್ 61ಕ್ಕೆ 4) ಫಲಿತಾಂಶ: ಆಸ್ಟ್ರೇಲಿಯಾಗೆ 177 ರನ್ ಜಯ ಪಂದ್ಯಶ್ರೇಷ್ಠ: ನಾಥನ್ ಲಿಯೋನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics