ಕ್ರೀಡೆ

ಯುವರಾಜ್ ಸಿಂಗ್ ಬಿಡುಗಡೆ ಮಾಡಿದ ಡೆಲ್ಲಿ ಡೇರ್‍ಡೆವಿಲ್

Shilpa D

ನವದೆಹಲಿ: ನಿರೀಕ್ಷೆಯಂತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಐಪಿಎಲ್ 9ನೇ ಆವೃತ್ತಿಗೆ ತಂಡದ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಅವರನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಭಾರತ ತಂಡದ ಮುಂಚೂಣಿ ಬೌಲರ್ ಇಶಾಂತ್ ಶರ್ಮಾ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಗುರುವಾರ ತಂಡದಿಂದ ಕೈಬಿಟ್ಟಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಕಟಿಸಲಾಗಿರುವ ಭಾರತ ಟಿ20 ತಂಡದಲ್ಲಿ ಹಲವು ತಿಂಗಳುಗಳ ನಂತರ ಸ್ಥಾನ ಗಿಟ್ಟಿಸಿರುವ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಕಳೆದ ಬಾರಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 16 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಖರೀದಿಸಿತ್ತು. ಆದರೆ ಯುವರಾಜ್ ಸಿಂಗ್ ಆಡಿದ 14 ಪಂದ್ಯಗಳಿಂದ ಕೇವಲ 248 ರನ್‌ಗಳಿಸಿ ನಿರೀಕ್ಷೆ ಹುಸಿಗೊಳಿಸಿದ್ದರು.

''ಅದ್ಭುತ ಆಟಗಾರರಾಗಿರುವ ಯುವರಾಜ್ ಸಿಂಗ್ ಅವರನ್ನು ತಂಡದ ಬಜೆಟ್‌ನ ವಿಚಾರದಿಂದಾಗಿ ಬಿಡುಗಡೆ ಮಾಡಲಾಗಿದೆ. ಉತ್ತಮ ಲಯದಲ್ಲಿರುವ ಅವರು ಭಾರತ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಆದರೆ ತಂಡದ ಬಜೆಟ್‌ನಿಂದ ಈ ನಿರ್ಧಾರ ಕೈಗೊಂಡಿದ್ದು, ವೈಯಕ್ತಿಕವಾಗಿ ಯುವರಾಜ್ ಜತೆ ಮಾತನಾಡಿದ್ದೇನೆ,'' ಎಂದು ಡೆಲ್ಲಿ ತಂಡದ ಸಿಇಒ ಹೇಮಂತ್ ದುವಾ ಹೇಳಿದ್ದಾರೆ.

ಇವರಲ್ಲದೆ ಶ್ರೀಲಂಕಾದ ಏಂಜಲೋ ಮ್ಯಾಥ್ಯೂ ಅವರನ್ನು ಸಹ ತಂಡದಿಂದ ಕೈಬಿಟ್ಟಿದ್ದು, ಇವರಿಬ್ಬರ ಬಿಡುಗಡೆಯಿಂದ 23 ಕೋಟಿ ಉಳಿಕೆಯಾಗಿದೆ ಎಂದು ಫ್ರಾಂಚೈಸಿ ಹೇಳಿದೆ. 2016ರ ಐಪಿಎಲ್ ವ್ಯಾಪಾರ ನಿಯಮದಂತೆ ಆಟಗಾರರನ್ನು ಇತರ ತಂಡಗಳಿಂದ ಫ್ರಾಂಚೈಸಿಗಳು ಸೆಳೆದುಕೊಳ್ಳಲು 2015ರ ಡಿ.15 ರಿಂದ ಡಿ.31ರ ವರಗೆ ಅವಕಾಶ ಕಲ್ಪಿಸಿತ್ತು.

SCROLL FOR NEXT