ತಿರುವನಂತಪುರಂ: 21 ವರ್ಷದ ಹರೆಯ ಮಹಾರಾಷ್ಟ್ರದ ನೆಟ್ ಬಾಲ್ ಆಟಗಾರ ಮಯೂರೇಶ್ ಪವಾರ್ ಆಟವಾಡುತ್ತಿರುವಾಗಲೇ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಮೈದಾನದಲ್ಲೇ ಸಾವನ್ನಪ್ಪಿದ್ದಾರೆ.
ತಿರುವನಂತಪುರಂನ ಅಗ್ರಿಕಲ್ಚರ್ ಕಾಲೇಜಿನ ಒಳಾಂಗಣ ಸ್ಟೇಡಿಯಂನಲ್ಲಿ ನ್ಯಾಷನಲ್ ಗೇಮ್ಸ್ ನಡೆಯುತ್ತಿದ್ದು, ಚಂಡೀಗಢ್ ತಂಡದ ವಿರುದ್ಧ ಮಹಾರಾಷ್ಟ್ರದ ಮಯೂರೇಶ್ ಪವಾರ್ ಸೋಮವಾರ ಬೆಳಗ್ಗೆ ಪಂದ್ಯವಾಡುತ್ತಿದ್ದರು. ಈ ಸಂದರ್ಭದಲ್ಲಿ ಎದೆ ನೋವು ಎಂದು ಕುಸಿದು ಬಿದ್ದಿದ್ದರು. ಕೂಡಲೇ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂಬುದಾಗಿ ವರದಿ ತಿಳಿಸಿದೆ.
ಎದೆ ನೋವಿನಿಂದ ಕುಸಿದು ಬಿದ್ದ ಪವಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪವಾರ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಯುವ ಪ್ರತಿಭೆ ಪವಾರ್ ನಿಧನಕ್ಕೆ ಕೇರಳ ಕ್ರೀಡಾ ಸಚಿವ ರಾಧಾಕೃಷ್ಣನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಪವಾರ್ ಮೃತ ಶರೀರ ರವಾನೆಗೆ ಸಂಬಂಧಿಸಿದಂತೆ ಸಂಪೂರ್ಣ ಖರ್ಚು ವೆಚ್ಚವನ್ನು ಕೇರಳ ಸರ್ಕಾರ ಭರಿಸಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.