ಮೆಲ್ಬರ್ನ್: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡ ಗೆದ್ದ ಪ್ರತಿ ಪಂದ್ಯದಲ್ಲೂ, ಜಯದ ನೆನಪಿಗಾಗಿ ಸ್ಟಂಪ್ ಅನ್ನು ತೆಗೆದುಕೊಳ್ಳುವ ಅಭ್ಯಾಸ ಎಲ್ಲರಿಗೂ ತಿಳಿದಿದೆ.
ಆದರೆ, ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿರುದ್ಧದ ಪ್ರತಿಷ್ಠಿತ ಪಂದ್ಯದಲ್ಲಿ ಗೆದ್ದ ನಂತರ ಧೋನಿ ಸ್ಟಂಪ್ ಅನ್ನು ಪಡೆಯಲು ಸಾಧ್ಯವಾಗಲಿಲ್ಲ. ಪ್ರಸಕ್ತ ವಿಶ್ವಕಪ್‍ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಎಲ್‍ಇಡಿ ಸ್ಟಂಪ್ ಗಳನ್ನು ಬಳಸಲಾಗಿದ್ದು, ಇದರ ಬೆಲೆ 40 ಸಾವಿರ ಅಮೆರಿಕನ್ ಡಾಲರ್ (ರು.24 ಲಕ್ಷ) ಆಗಿದೆ. ಅಲ್ಲದೆ ಎರಡು ಬೇಲ್ಸ್‍ಗಳು ಒಂದು ಐ-ಫೋನ್ (ರು. 50 ಸಾವಿರ) ಮೊತ್ತದಷ್ಟು ದುಬಾರಿಯಾಗಿದೆ. ಹಾಗಾಗಿ ಐಸಿಸಿಯಿಂದ ಅಧಿಕೃತವಾಗಿ ಅನುಮತಿ ಸಿಗದ ಹೊರತು ಧೋನಿ ಈ ಸ್ಟಂಪ್‍ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಪಾಕಿಸ್ತಾನ ವಿರುದ್ಧ ಪಂದ್ಯ ಮುಕ್ತಾಯದ ನಂತರ ಧೋನಿ ಒಂದು ಬೇಲ್ಸ್ ಅನ್ನು ತೆಗೆದುಕೊಂಡರು. ನಂತರ ಲೆಗ್ ಅಂಪೈರ್ ಆಗಿದ್ದ ಇಂಗ್ಲೆಂಡ್‍ನ ಇಯಾನ್ ಗೌಲ್ಡ್, ಧೋನಿ ಬಳಿ ಬಂದು ನಗುತ್ತಾ, ಅನುಮತಿ ಇಲ್ಲದೆ ಅದನ್ನು ತೆಗೆದುಕೊಳ್ಳುವಂತಿಲ್ಲ ಎಂದು ವಿವರಿಸಿದರು. ಹಾಗಾಗಿ ಪ್ರತಿಷ್ಠಿತ ಪಂದ್ಯದಲ್ಲಿ ಗೆಲವಿನ ಹೊರತಾಗಿ ಧೋನಿ ನೆನಪಿನ ಕಾಣಿಕೆಯನ್ನು ಪಡೆಯಲು ವಿಫಲರಾದರು.